ಬೆಂಗಳೂರು:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಆರೋಪಿಗಳಿಗೆ ಮೈಸೂರು ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ. ಇದಕ್ಕೆ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿಕೃಷ್ಣ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಕಿಡಿಕಾರಿದ್ದಾರೆ. ಆರ್. ಅಶೋಕ್ ಮಾತನಾಡಿ, ಲೋಕಾಯುಕ್ತ ಅಧಿಕಾರಿಗಳು ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ. ಪ್ರಕರಣದಲ್ಲಿ ಏನೂ ಇಲ್ಲ ಅಂದ್ರಿ, ನೀವು ಮುಗ್ಧರು ಅಂದ್ರಿ. ಆದರೆ, ದುಬಾರಿ ವಕೀಲರನ್ನು ಏಕೆ ಕರೆ ತಂದ್ರಿ ಎಂದು ಪ್ರಶ್ನಿಸಿದ್ದಾರೆ.
ಈ ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಪೊಲೀಸ್ ಅಧಿಕಾರಿಗೆ ವರ್ಗಾವಣೆ, ಪ್ರಮೋಷನ್ ಬೇಕು. ಅದಕ್ಕೆ ಹೀಗೆ ಮಾಡಿದ್ದಾರೆ. ಸಿಬಿಐ ತನಿಖೆಗೆ ಕೊಟ್ಟರೆ ಮಾತ್ರ ಸತ್ಯ ಹೊರ ಬರುತ್ತದೆ. ಇದು ಪೂರ್ವ ನಿಯೋಜಿತವಾದ ವರದಿ. ತಪ್ಪಿಲ್ಲ ಅಂದರೆ 14 ಸೈಟ್ ಯಾಕೆ ವಾಪಸ್ ಕೊಟ್ಟರು? A1, A2, A3 ತಪ್ಪಿಲ್ಲ ಅಂತ ಲೋಕಾಯುಕ್ತ ಹೇಳುತ್ತದೆ. ಲೇಔಟ್ ಅಕ್ರಮ, ಅದು ಅವರಿಗೆ ಗೊತ್ತೇ ಇಲ್ಲ ಅಂತಾರೆ. 50:50 ಸೈಟ್ ಬೇಕು ಅಂದಾಗ ಮಾತ್ರ ನೋಡಿದ್ದಾರೆ. ಸಿದ್ದರಾಮಯ್ಯ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಸಿದ್ದರಾಮಯ್ಯನವರು ಒಂದು ಪತ್ರ ಕೂಡ ಬರೆದಿಲ್ಲ. ಸಿಎಂ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ಳೋಕೆ ಮೂರ್ಖರಾ? ಎಂದು ವ್ಯಂಗ್ಯವಾಡಿದ್ದಾರೆ.
ಲೋಕಾಯುಕ್ತ ಬಿ ರಿಪೋರ್ಟ್ನಿಂದ ತುಂಬಾ ನೋವಾಗಿದೆ. ಅಲ್ಲದೇ, ಇದು ನಮಗಿಂತಲೂ ದುಪ್ಪಟ್ಟು ಕಾಂಗ್ರೆಸ್ ನವರಿಗೆ ಆಗಿದೆ. ಸಿಎಂ ಆಗಬೇಕೆಂಬ ಕನಸು ಇಟ್ಟುಕೊಂಡವರಿಗೆ ನಿದ್ದೆ ಇಲ್ಲದಾಗೆ. ಅವರ ಕನಸುಗಳು ನುಚ್ಚು ನೂರಾಗಿವೆ ಎಂದು ಲೇವಡಿ ಮಾಡಿದ್ದಾರೆ.