ಚಿತ್ರದುರ್ಗ: ಮೈಸೂರು ರಾಜವಂಶಸ್ತ ಹಾಗೂ ಸಂಸದ ಯದುವೀರ್ ಶ್ರೀಕೃಷ್ಣದತ್ ಒಡೆಯರ್ (Yaduveer Srikrishnadutt Wodeyar) ದಲಿತ ಕಾಲೋನಿಯಲ್ಲಿ ಸಹಪಂಕ್ತಿ ಭೋಜನ ಸವಿದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವೇದಾವತಿ ಬಡಾವಣೆಯ ಎ.ಕೆ. ಕಾಲೋನಿಯಲ್ಲಿ ನಡೆದ ಭೀಮ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಸಹಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಂಕ್ತಿಯಲ್ಲಿ ಎಲ್ಲರ ಜೊತೆಗೆ ಊಟ ಸವಿದಿದ್ದಾರೆ.
ಈ ವೇಳೆ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳಿವೆ. ಸಮಾನ ಸ್ಥಾನಮಾನ ಇದೆ. ಈ ಮೂಲಕ ಅರ್ಧ ಸತ್ಯ ಮಂಡಿಸುವ ಜನರಿಗೆ ಉತ್ತರ ನೀಡಬೇಕಿದೆ. ಕಾಂಗ್ರೆಸ್ ಅಪಪ್ರಚಾರ ಮಾಡಿ ಸಂವಿಧಾನ ಬದಲಿಸುವ ಕಾರ್ಯ ಮಾಡುತ್ತಲೇ ಬಂದಿದೆ. ನಮ್ಮ ಪಕ್ಷದ ನಾಯಕರು ಎಂದೂ ಅಧಿಕೃತವಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಪಕ್ಷದ ಲಾಭಕ್ಕಾಗಿ ಸಂವಿಧಾನ ಬಳಸಿರುವವರು ಯಾರು, ಸಂವಿಧಾನದ ಮೂಲಕ ಜನರನ್ನು ಸುಭದ್ರವಾಗಿಟ್ಟಿರುವವರು ಯಾರು ಎಂಬುವುದು ಜನರಿಗೆ ಗೊತ್ತಿದೆ ಎಂದಿದ್ದಾರೆ.
ಸಂಪೂರ್ಣ ಭಾರತದ ಅಭಿವೃದ್ಧಿ ಬಿಜೆಪಿಯ ಗುರಿಯಾಗಿದೆ. 25 ಕೋಟಿ ಜನರನ್ನು ಪ್ರಧಾನಿ ನರೇಂದ್ರ ಮೋದಿ ಬಡತನದಿಂದ ಮುಕ್ತ ಮಾಡಿದ್ದಾರೆ. ಮುಂದಿನ ಎರಡು ದಶಕಕ್ಕೆ ನಾವು ಬಲಿಷ್ಠರಾಗಿ ಬೆಳೆಯುತ್ತೇವೆ. ಮುಂಬರುವ ಪೀಳಿಗೆ ಬಲಿಷ್ಠ ಭಾರತದಲ್ಲಿ ಬದುಕಬೇಕಾದರೆ ನಮಗೆ ಕೈ ಜೋಡಿಸಬೇಕು ಎಂದಿದ್ದಾರೆ.