ಬ್ರಹ್ಮಚರ್ಯದಿಂದ ಗೃಹಸ್ಥಾಶ್ರಮಕ್ಕೆ ಸಂಸದ ತೇಜಸ್ವಿ ಸೂರ್ಯ ಕಾಲಿಡಲು ಅಣಿಯಾಗುತ್ತಿದ್ದಾರೆ. ಮುಂದಿನ ತಿಂಗಳು ಮಾರ್ಚ್ 5 ಹಾಗೂ 6 ರಂದು ಸಂಸದ ತೇಜಸ್ವಿ ಸೂರ್ಯರ ವಿವಾಹ ಖ್ಯಾತ ಗಾಯಕಿ ಸಿವಾಶ್ರೀ ಸ್ಕಂದಪ್ರಸಾದ್ ಅವರ ಜೊತೆಗೆ ನಡೆಯಲಿದ್ದು, ಇದಕ್ಕೆ ಬೇಕಾದ ಸಕಲ ಸಿದ್ಧತೆಗಳು ಈಗ ನಡೆಯುತ್ತಿದೆ.
ಮಾರ್ಚ್ 6 ರಂದು ಗೃಹಸ್ಥಾಶ್ರಮ ಪ್ರವೇಶಿಸಲಿರುವ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ತೇಜಸ್ವಿ ಸೂರ್ಯ, ಮಾರ್ಚ್ 6 ರಂದು ಗೃಹಸ್ಥಾಶ್ರಮ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮದವರಾದ ತೇಜಸ್ವಿ ಸೂರ್ಯ ಅವರು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಅವರ ತಂದೆ ಹಾಗೂ ತಾಯಿಯ ಜೊತೆಗೆ ಇಲ್ಲಿಯೇ ವಾಸವಿದ್ದು, ವಿದ್ಯಾಭ್ಯಾಸವನ್ನು ಇಲ್ಲಿಯೇ ಮುಗಿಸಿ, ಎರಡನೇ ಬಾರಿಗೆ ಇದೀಗ ಸಂಸತ್ ಪ್ರವೇಶಿಸಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದ ಕೀರ್ತಿ ತೇಜಸ್ವಿ ಸೂರ್ಯರಿಗೆ ಸಲ್ಲಿಕೆಯಾಗಿದ್ದು, 33 ಹರೆಯ ತೇಜಸ್ವಿ ಸೂರ್ಯ ಮುಂದಿನ ತಿಂಗಳು ಬ್ರಹ್ಮಚರ್ಯದಿಂದ ಗೃಹಸ್ಥಾಶ್ರಮ ಸೇರಲಿದ್ದಾರೆ. ತಮಿಳುನಾಡು ಮೂಲದ ಖ್ಯಾತ ಗಾಯಕಿ ಸಿವಾಶ್ರೀ ಸ್ಕಂದಪ್ರಸಾದ್ ಅವರನ್ನು ವಿವಾಹವಾಗುತ್ತಿರುವ ತೇಜಸ್ವಿ ಸೂರ್ಯ, ಮದುವೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮೊದಲಿಗೆ ತೇಜಸ್ವಿ ಸೂರ್ಯ ಅವರ ವಿವಾಹವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದ ಗ್ರಾಮದಲ್ಲಿಯೇ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ, ಕೆಲ ಹಿರಿಯರ ಮಾರ್ಗದರ್ಶನದಂತೆ ಬೆಂಗಳೂರಿನ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ಮಾರ್ಚ್ 5, 6 ರಂದು ಮದುವೆ ನಡೆಸಲು ನಿರ್ಧರಿಸಲಾಗಿದೆ.
ಮಾರ್ಚ್ 5 ರ ಸಂಜೆ ವರಪೂಜೆ ಶಾಸ್ತ್ರ ನೆರವೇರಲಿದೆ. ಮಾರ್ಚ್ 6 ರಂದು ಬೆಳಿಗ್ಗೆ ಕಾಶಿಯಾತ್ರೆ, ಜೀರಿಗೆ ಬೆಲ್ಲ ಶಾಸ್ತ್ರ ನಡೆಯಲಿದ್ದು, ಬೆಳಿಗ್ಗೆ 9:30 ರಿಂದ 10:15 ರ ನಡುವಿನ ಶುಭ ತುಲಾ ಲಗ್ನದ ಮುಹೂರ್ತದಲ್ಲಿ ತೇಜಸ್ವಿ ಸೂರ್ಯ, ಸಿವಾಶ್ರೀ ಸ್ಕಂದಪ್ರಸಾದ್ ಅವರ ಕುತ್ತಿಗೆಗೆ ತಾಳಿ ಕಟ್ಟಲಿದ್ದಾರೆ. ಮದುವೆಗೆ ಕೇವಲ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿದ್ದು, ಅಂದೇ ಮಧ್ಯಾಹ್ನ ಸಿವಾಶ್ರೀ ಸ್ಕಂದಪ್ರಸಾದ್ ಅವರನ್ನು ತೇಜಸ್ವಿ ಸೂರ್ಯ ಕುಟುಂಬ ಗಿರಿನಗರದಲ್ಲಿರುವ ತಮ್ಮ ನಿವಾಸಕ್ಕೆ ತುಂಬಿಸಿಕೊಳ್ಳುವ ಶಾಸ್ತ್ರ ನೆರವೇರಿಸಲಿದ್ದಾರೆ. ಇದೆಲ್ಲಾ ಶಾಸ್ತ್ರಗಳು ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದಂತೆ ಮಾಡಲು ಎರಡು ಕುಟುಂಬಸ್ಥರು ಮಾತುಕತೆ ಮಾಡಿಕೊಂಡಿದ್ದಾರೆ.
ಆರತಕ್ಷತೆ ಘಟಾನುಘಟಿ ನಾಯಕರಿಗೆ ಆಹ್ವಾನ
ಸಂಸದ ತೇಜಸ್ವಿ ಸೂರ್ಯ, ಸಿವಾಶ್ರೀ ಸ್ಕಂದಪ್ರಸಾದ್ ಅವರ ಮದುವೆಯ ಬಳಿಕ ಅದ್ದೂರಿ ಆರತಕ್ಷತೆ ಆಯೋಜನೆ ಮಾಡಲಾಗಿದೆ. ಮಾರ್ಚ್ 9 ರ ಭಾನುವಾರ ಬೆಳಿಗ್ಗೆ 10:30 ರಿಂದ 1:30 ರವರೆಗೆ ರಾಜಕಾರಣಿಗಳು, ಸಿನಿಮಾರಂಗದ ಗಣ್ಯರು, ಕಾರ್ಯಕರ್ತರುಗಳು ಹಾಗೂ ತೇಜಸ್ವಿ ಸೂರ್ಯ ಅವರ ಬೆಂಬಲಿಗ ಅಭಿಮಾನಿಗಳಿಗಾಗಿ, ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಮದುವೆ ಹಾಗೂ ಆರತಕ್ಷತೆ ಎರಡಕ್ಕೂ ಆಹ್ವಾನ ತಲುಪಿಸಲಾಗಿದೆ. ದೆಹಲಿಯಲ್ಲಿ ಪ್ರತ್ಯೇಕವಾಗಿ ಆರತಕ್ಷತೆಯನ್ನು ಏನೂ ಕುಟುಂಬಸ್ಥರು ಆಯೋಜಿಸಿಲ್ಲ. ಪ್ರಧಾನಿಗಳು ಸೇರಿದಂತೆ ಕೆಲ ಘಟಾನುಘಟಿ ನಾಯಕರು ಮದುವೆಗೆ ಬಾರದೇ ಹೋದರೆ, ಅಂತಹವರನ್ನು ನವ ವಧುವರರು ದೆಹಲಿಯಲ್ಲಿ ಅವರವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆಯಲಿದ್ದಾರೆ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿದೆ.
ಇಷ್ಟು ದಿನ ಒಂಟಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ, ತಮಗೊಂದು ಜೋಡಿಯನ್ನು ಹುಡುಕಿಕೊಂಡಿದ್ದು, ಮಾರ್ಚ್ 6 ರಂದು ಗೃಹಸ್ಥಾಶ್ರಮ ಪ್ರವೇಶಿಸಲು ಸಜ್ಜಾಗಿದ್ದಾರೆ. ತೇಜಸ್ವಿ ಸೂರ್ಯರ ದಾಂಪತ್ಯ ಜೀವನ ಸುಖವಾಗಿರಲಿ ಎಂದು ನಾವು ಆಶಿಸೋಣ.