ಬೆಂಗಳೂರು : ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿ ಇಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರಾಮಮೂರ್ತಿ ಪ್ರತಿಭಟನೆ ನಡೆಸಿದ್ದಾರೆ. ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಆರ್‌ವಿ ಮೆಟ್ರೋ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಮೆಟ್ರೋ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಆರ್‌ವಿ ಮೆಟ್ರೋ ನಿಲ್ದಾಣದ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಈ ವೇಳೆ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ಹಾಗೂ ಬಿಜೆಪಿ ಮಾಜಿ ಪಾಲಿಕೆ ಸದಸ್ಯರು ಖಾಲಿ ಟ್ರಂಕ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರ ಖಾಲಿ ಟ್ರಂಕ್ ಎಂದು ಬರೆದಿರುವ ಟ್ರಂಕ್ ಹಿಡಿದು ತೇಜಸ್ವಿ ಸೂರ್ಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದರು. ಪ್ರತಿಭಟನೆ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ನಾನು ಏರ್ಪೋರ್ಟ್‌ಗೆ ಹೋಗಬೇಕಿದೆ. ನ್ಯಾಷನಲ್ ಕಾಲೇಜು ಬಸ್ ಸ್ಟಾಪ್ ವರೆಗೂ ಮೆಟ್ರೋದಲ್ಲಿ ಹೋಗುತ್ತಿದ್ದೇನೆ. ನನ್ನ ಬಳಿ ಟಿಕೆಟ್ ಇದೆ. ನಾನು ಮೆಟ್ರೋದಲ್ಲಿ ಹೋಗುವಾಗ ಖಾಲಿ ಟ್ರಂಕ್ ಹಿಡಿದು ಹೋಗುತ್ತಿದ್ದೇನೆ. ದಯವಿಟ್ಟು ಯಾರು ಅಡ್ಡಬರಬಾರದು. ಎಲ್ಲರೂ ಹೇಗೆ ಮೆಟ್ರೋದಲ್ಲಿ ಹೋಗುತ್ತಾರೋ ಹಾಗೇ ನಾನು ಕೂಡ ಹೋಗುತ್ತಿದ್ದೇನೆ. ಇದರಲ್ಲಿ ಏನು ತಪ್ಪಿದೆ? ನಾನು ಯಾವುದೇ ಮುಷ್ಕರ ಅಥವಾ ಪ್ರತಿಭಟನೆ ಮಾಡುತ್ತಿಲ್ಲ. ಇದು ಕೇವಲ ಕಾಂಗ್ರೆಸ್ ಸರ್ಕಾರದಂತೆಯೇ ಖಾಲಿ ಟ್ರಂಕ್ ಅಷ್ಟೇ. ಇದರಲ್ಲಿ ಏನೂ ಇಲ್ಲ ಎಂದು ಹೇಳಿದ್ದಾರೆ..
ಪ್ರತಿಭಟನೆ ಶಾಂತಿಯುತವಾಗಿ ನಡೆಯುವಂತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ.
ಇದನ್ನೂ ಓದಿ : ಬೆಳಗಾವಿ | ಡ್ರಗ್ಸ್ ಮುಕ್ತ ನಗರಕ್ಕೆ ಪೊಲೀಸ್ ಕಮಿಷನರ್ ದಿಟ್ಟ ಹೆಜ್ಜೆ ; ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ಪ್ಲಾನ್



















