ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ರಾಜಕೀಯ ಒತ್ತಡವಿಲ್ಲದೆ ತನಿಖೆಯಾಗಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದ್ದಾರೆ
ವಿಧಾನಸೌಧದಲ್ಲಿ ಮಾತನಾಡಿದ ಎಂ.ಸಿ ಸುಧಾಕರ್, ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬೆಳಿಗ್ಗೆ ಮಾಹಿತಿ ಬಂದಿದೆ. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಕಾರಣ ಏನು ಎನ್ನುವ ಬಗ್ಗೆ ಬರೆದಿದ್ದಾರೆ. ಅವುಗಳಲ್ಲಿ ಸಂಸದ ಸುಧಾಕರ್ ಮೇಲೆ ಆರೋಪ ಮಾಡಿದ್ದಾರೆ. ಎಂಪಿ ಅವರ ಅನುಯಾಯಿ ನಾಗೇಶ್, ಮಂಜುನಾಥ್ ಕಾರಣ ಅಂತ ಪತ್ರ ಬರೆದಿದ್ದಾರೆ. ಯಾರೇ ಆಗಲಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದು ಗಂಭೀರ ಆರೋಪ. ಕೆಲಸ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಇದು ಸಂಪೂರ್ಣ ತನಿಖೆ ಆಗಬೇಕು. ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ. ಡೆತ್‌ನೋಟ್‌ನಲ್ಲಿ ಸಂಸದ ಸುಧಾಕರ್ ಅವರ ಹೆಸರು ಇದೆ. ತನಿಖೆ ಆಗಲಿ. ಅವರ ಕುಟುಂಬದವರು ಏನು ಹೇಳುತ್ತಾರೆ ಅದೆಲ್ಲದರ ತನಿಖೆ ಆಗಲಿ. ಪಾರದರ್ಶಕ ತನಿಖೆ ಆಗುತ್ತದೆ. ಚಾಲಕ ಬಾಬು ಎಸ್‌ಸಿ ಸಮುದಾಯಕ್ಕೆ ಸೇರಿದ ಯುವಕ. ಸಮಗ್ರ ತನಿಖೆ ಆಗುತ್ತದೆ. ರಾಜಕೀಯ ಒತ್ತಡ ಇಲ್ಲದೆ ತನಿಖೆ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ.



















