ಮಂಗಳೂರು/ನವ ದೆಹಲಿ : ಮಂಗಳೂರಿನಲ್ಲಿ ಶೀಘ್ರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಕಚೇರಿ ಸ್ಥಾಪಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದ.ಕ. ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗೃಹ ಸಚಿವರ ಕಚೇರಿಯಲ್ಲಿ ಅಮಿತ್ ಶಾರನ್ನು ಚೌಟ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸಮಗ್ರ ಗುಪ್ತಚರ ಸಮನ್ವಯ ಮತ್ತು ಕಾರ್ಯಾಚರಣೆಯ ಸಾಮರ್ಥ್ಯದೊಂದಿಗೆ ಶಾಶ್ವತವಾದ ಸಂಪೂರ್ಣ ಸುಸಜ್ಜಿತ ಎನ್‌ಐಎ ಕಚೇರಿಯನ್ನು ಸ್ಥಾಪಿಸಲು ವಿನಂತಿಸಿದ್ದು ಇದರಿಂದ ಇಡೀ ದಕ್ಷಿಣ ಭಾರತಕ್ಕೆ ಒಂದು ದೃಢ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸುವ ಕರಾವಳಿಗರ ಬೇಡಿಕೆಯನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕೆಂದು ಎಂದು ಬ್ರಿಜೇಶ್ ಚೌಟ ಅವರು ಗೃಹ ಸಚಿವ ಅಮಿತ್ ಶಾ ಅವರಲ್ಲಿ ವಿನಂತಿಸಿದ್ದಾರೆ.
ಜಿಲ್ಲೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಬಂಧನಗಳು ಮತ್ತು ಚಟುವಟಿಕೆಗಳು ಕಳೆದ 10 ವರ್ಷ ಗಳಲ್ಲಿ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖ ಸದಸ್ಯರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಎನ್‌ಐಎ ತನಿಖಾಧಿಕಾರಿ ಗಳು ಈಗಾಗಲೇ ಬಂಧಿಸಿದ್ದಾರೆ. ಪಿಎಫ್‌ಐ ಸಂಘಟನೆಯ ಗುಪ್ತ ಭಾಗವಾಗಿದ್ದ ಸರ್ವೀಸ್ ಟೀಂನ ಅಸ್ತಿತ್ವ ರಹಸ್ಯ ಸಭೆಗಳು, ತರಬೇತಿ ಕೇಂದ್ರದ ಬಗ್ಗೆಯೂ ಎನ್‌ಐಎ ತನಿಖೆಗಳು ಬೆಳಕುಚೆಲ್ಲಿತ್ತು ಎಂದು ಹೇಳಿ ರುವ ಚೌಟ ಅವರು ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಅಗತ್ಯತೆಯನ್ನು ಗೃಹ ಸಚಿವರಿಗೆ ಮನವರಿಕೆ ಮಾಡಿದ್ದಾರೆ.
ಈ ನಡುವೆ, ಕಡಲ ನಗರಿಯಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಅಂಕುಶ ಹಾಕಲು ವಿನಂತಿಸಿರುವ ಸಂಸದ ಚೌಟ ಅವರು, ಕಳೆದ ಮಾರ್ಚ್‌ನಲ್ಲಿ ಮಂಗಳೂರಿನಲ್ಲಿ 75 ಕೋಟಿ ಮೌಲ್ಯದ 37 ಕೆ.ಜಿ.ಗೂ ಹೆಚ್ಚು ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಅಂತರ್‌ರಾಷ್ಟ್ರೀಯ ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಪ್ರಸಕ್ತ ವರ್ಷದಲ್ಲೇ ಇಲ್ಲಿವರೆಗೆ ಜಿಲ್ಲೆಯಲ್ಲಿ 375ಕ್ಕೂ ಹೆಚ್ಚು ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 67ಕ್ಕೂ ಹೆಚ್ಚು ವ್ಯಕ್ತಿಗಳು ಬಂಧನವಾಗಿದ್ದಾರೆ ಎಂದು ಸಂಸದರು ಗೃಹ ಸಚಿವರಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಎನ್‌ಐಎ ತನಿಖೆಗೆ ವಹಿಸಿದೆ. ಪ್ರಕರಣದ ಗಂಭೀರತೆ ಅರಿತು ಸುಹಾಸ್ ಹತ್ಯೆಯನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸುವಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುತುವರ್ಜಿ ವಹಿಸಿ ತ್ವರಿತ ಕ್ರಮ ಕೈಗೊಂಡಿರುವುದಕ್ಕೆ ಸಂಸದ ಬ್ರಿಜೇಶ್ ಚೌಟ ಅವರು ಅಭಿನಂದಿಸಿದ್ದಾರೆ.