ಹಿಂದಿ ಹೇರಿಕೆ ವಿರೋಧಿ ಕರ್ನಾಟಕದ ವತಿಯಿಂದ ಅ. 22ರಂದು ಮಂಗಳವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನ ರಾಷ್ಟ್ರಕವಿ ಕುವೆಂಪು ಪ್ರತಿಮೆ ಹತ್ತಿರ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಘೋಷವಾಕ್ಯ ಅನಾವರಣದ ಹಿನ್ನೆಲೆಯಲ್ಲಿ ಕನ್ನಡ ಬೆಳಗಲಿ- ಹಿಂದಿ ತೊಲಗಲಿ ಚಳುವಳಿ ಕಾರ್ಯಕ್ರಮ ನಡೆಯಲಿದೆ.
ಈ ಚಳುವಳಿಯಲ್ಲಿ ಹಿರಿಯ ನಾಯಕರು, ಕನ್ನಡ ಸಂಘಟನೆಗಳ ಮುಖಂಡರು, ಬರಹಗಾರರು, ಚಲನಚಿತ್ರ-ರಂಗಭೂಮಿ ಕಲಾವಿದರು, ದಲಿತ, ರೈತ ಪ್ರಗತಿಪರ ಚಳುವಳಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಕೇವಲ ಒಂದು ಸಂಭ್ರಮದ ಆಚರಣೆಯಾಗಿ ಮುಗಿದು ಹೋಗುವ ಬದಲು ಕನ್ನಡಿಗರಲ್ಲಿ ನಾಡು ನುಡಿಯ ಬಗ್ಗೆ ಜಾಗೃತಿ ಮೂಡುವಂತೆ ಆಚರಿಸೋಣ ಎಂದು ಈ ಸಂದರ್ಭದಲ್ಲಿ ಸಂಘಟನೆ ಕರೆ ನೀಡಿದೆ. ಹೀಗಾಗಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಮಿತಿಯ ಸಂಚಾಲಕರಾದ ಶೆ.ಬೊ. ರಾಧಾಕೃಷ್ಮ, ಪಾರ್ವತೀಶ ಬಿಳಿದಾಳೆ ಮನವಿ ಮಾಡಿದ್ದಾರೆ.