ಬೆಂಗಳೂರು: ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಜನಮಿತ್ರ ಮೂವೀಸ್ ನಿರ್ಮಾಣದ ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರ ಮಾರ್ಚ್ 28ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಬರಗೂರರ ಕಾದಂಬರಿಯನ್ನು ಆಧರಿಸಿ ಈ ಚಿತ್ರ ನಿರ್ಮಾಣಗೊಂಡಿದೆ. ಕಸ್ತೂರ್ ಬಾ ಅವರನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಕಸ್ತೂರ್ ಬಾ ಅವರ ಬದುಕಿನ ಕೆಲವು ಪ್ರಮುಖ ಘಟನೆಗಳ ಮೂಲಕ ಆದರ್ಶ ಮತ್ತು ಕಟು ವಾಸ್ತವಗಳ ಕಥನವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಬದುಕಿನ ದ್ವಂದ್ವಗಳನ್ನು ಎದುರಿಸುತ್ತಲೇ ಅದನ್ನು ಮೀರುವ ವ್ಯಕ್ತಿತ್ವಗಳಾಗಿ ಕಸ್ತೂರ್ ಬಾ ಮತ್ತು ಗಾಂಧಿಜಿಯವರನ್ನು ಚಿತ್ರಿಸಲಾಗಿದೆ. ಕಸ್ತೂರ್ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಬದುಕನ್ನು ನಿಭಾಯಿಸಿದ ಚರಿತೆಯನ್ನು ಈ ಚಿತ್ರವು ಅನಾವರಣಗೊಳಿಸುತ್ತದೆ. ಇದು ಏಕಕಾಲಕ್ಕೆ ಕಸ್ತೂರ್ ಬಾ ಮತ್ತು ಗಾಂಧಿಜಿ – ಇಬ್ಬರ ವ್ಯಕ್ತಿತ್ವವನ್ನು ಒಳಗೊಂಡ ಚಿತ್ರವಾಗಿದೆ. ತಾಯಿ ಕಸ್ತೂರ್ ಗಾಂಧಿ’ ಚಿತ್ರವು ಕೆಲವು ವಿದೇಶಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಗಾಗಿದ್ದು ಲಾಸ್ ಏಂಜಲೀಸ್ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಸುರೇಶ್ ಅರಸು ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿಯೂ ಬಂದಿದೆ.

ಕಸ್ತೂರ್ ಬಾ ಮತ್ತು ಗಾಂಧಿಜಿಯವರ ಬಾಲ್ಯ, ಯೌವನ ಮತ್ತು ಮುಪ್ಪಿನ ಹಂತಗಳು ಈ ಚಿತ್ರದಲ್ಲಿವೆ. ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ ಮತ್ತು ಗಾಂಧಿಯಾಗಿ ಕಿಶೋರ್ ಅಭಿನಯಿಸಿದ್ದಾರೆ. ಶ್ರೀನಾಥ್ ಅವರು ಅಂಬೇಡ್ಕರ್ ಪಾತ್ರದಲ್ಲಿದ್ದಾರೆ. ಮಾಸ್ಟರ್ ಆಕಾಂಕ್ಷ್ ಬರಗೂರು, ಸುಂದರರಾಜು, ಪ್ರಮೀಳಾ ಜೋಷಾಯ್, ರಾಘವ್, ಸುಂದರರಾಜ ಅರಸು, ರೇಖಾ, ವೆಂಕಟರಾಜು, ವತ್ಸಲಾ ಮೋಹನ್, ಕುಮಾರಿ ಸ್ಪಂದನ ಮುಂತಾದವರು ತಾರಾಗಣದಲ್ಲಿದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮತ್ತು ಮೈತ್ರಿಬರಗೂರು ಕಲಾ ನಿರ್ದೇಶನ ಮಾಡಿರುವ ಈ ಚಿತ್ರದ ನಿರ್ಮಾಪಕರು ಗೀತಾ ಬಿ.ಜಿ. ಬರಗೂರರು ಚಿತ್ರಕತೆ, ಸಂಭಾಷಣೆ ಗೀತರಚನೆ ಜೊತೆಗೆ ನಿರ್ದೇಶಿಸಿದ್ದಾರೆ.
