ಕೋಲ್ಕತ್ತಾ/ನವದೆಹಲಿ: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಶತಮಾನದಷ್ಟು ಹಳೆಯದಾದ ಮಸೀದಿಯೊಂದು ಈಗ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಮಾನಗಳ ಸುರಕ್ಷತೆಗೆ ಈ ಮಸೀದಿ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಕೊಂಡ ಬೆನ್ನಲ್ಲೇ, ಬಿಜೆಪಿ ನಾಯಕರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ವಿಮಾನ ಹಾರಾಟಕ್ಕೆ ಕಂಟಕವಾಗಿದೆಯೇ?
ವಿಮಾನ ನಿಲ್ದಾಣದ ದ್ವಿತೀಯ ರನ್‌ವೇಯಿಂದ ಕೇವಲ 300 ಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ‘ಬಂಕ್ರಾ ಮಸೀದಿ’ ವಿಮಾನ ಕಾರ್ಯಾಚರಣೆಗೆ ಸುರಕ್ಷಿತವಲ್ಲ ಎಂದು ಸ್ವತಃ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಮಸೀದಿ ಇರುವ ಕಾರಣದಿಂದ ರನ್‌ವೇಯ ಆರಂಭದ ಬಿಂದುವನ್ನು 88 ಮೀಟರ್‌ಗಳಷ್ಟು ಸ್ಥಳಾಂತರಿಸಬೇಕಾಗಿದೆ. ಇದು ತುರ್ತು ಸಂದರ್ಭಗಳಲ್ಲಿ ರನ್‌ವೇ ಬಳಕೆಗೆ ಅಡ್ಡಿಯುಂಟುಮಾಡುತ್ತಿದೆ ಮತ್ತು ಸುರಕ್ಷಿತ ವಿಮಾನ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಳವಳ ವ್ಯಕ್ತಪಡಿಸಿದ್ದಾರೆ.

ಮಸೀದಿ ಅಲ್ಲಿಗೆ ಬಂದಿದ್ದು ಹೇಗೆ?
ಕುತೂಹಲಕಾರಿ ಸಂಗತಿಯೆಂದರೆ, ವಿಮಾನ ನಿಲ್ದಾಣ ನಿರ್ಮಾಣವಾಗುವ ದಶಕಗಳ ಮುನ್ನವೇ ಈ ಮಸೀದಿ ಅಲ್ಲಿತ್ತು. ವರದಿಗಳ ಪ್ರಕಾರ, 1890ರ ಸುಮಾರಿಗೆ (19ನೇ ಶತಮಾನದ ಅಂತ್ಯದಲ್ಲಿ) ಈ ಮಸೀದಿ ನಿರ್ಮಾಣವಾಗಿತ್ತು. ಆಗ ಅಲ್ಲಿ ಹಳ್ಳಿಯಿತ್ತು. 1924ರಲ್ಲಿ ಬ್ರಿಟಿಷರು ಇಲ್ಲಿ ಏರೋಡ್ರಮ್ ನಿರ್ಮಿಸಿದರು. ನಂತರ 1950 ಮತ್ತು 60ರ ದಶಕದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸುತ್ತಮುತ್ತಲಿನ ಹಳ್ಳಿಗಳನ್ನು ತೆರವುಗೊಳಿಸಲಾಯಿತು. ಆದರೆ, ಸ್ಥಳೀಯ ಒಪ್ಪಂದದ ಮೇರೆಗೆ ಮಸೀದಿಯನ್ನು ಮಾತ್ರ ಹಾಗೆಯೇ ಉಳಿಸಿಕೊಳ್ಳಲಾಯಿತು.
ಸುರಕ್ಷತೆಗಾ? ಓಲೈಕೆಗಾ?
“ಓಲೈಕೆ ರಾಜಕಾರಣಕ್ಕಾಗಿ ಪ್ರಯಾಣಿಕರ ಸುರಕ್ಷತೆಯನ್ನು ಬಲಿಕೊಡಲಾಗುತ್ತಿದೆ,” ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಅಮಿತ್ ಮಾಳವೀಯ ಮತ್ತು ಸುವೇಂದು ಅಧಿಕಾರಿ ಅವರು, ಅತೀ ಸೂಕ್ಷ್ಮ ಭದ್ರತಾ ವಲಯದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿರುವುದು ಮತ್ತು ಮಸೀದಿಯನ್ನು ಸ್ಥಳಾಂತರಿಸದಿರುವುದು ಪ್ರಯಾಣಿಕರ ಜೀವಕ್ಕೆ ಕುತ್ತು ತರಬಹುದು ಎಂದು ಎಚ್ಚರಿಸಿದ್ದಾರೆ. ಪ್ರಸ್ತುತ ಭಕ್ತರು ಪ್ರಾರ್ಥನೆಗೆ ತೆರಳಲು ವಿಮಾನ ನಿಲ್ದಾಣ ಪ್ರಾಧಿಕಾರವೇ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ.
ಸ್ಥಳಾಂತರಕ್ಕೆ ಹಿಂದೇಟು
ಮಸೀದಿಯನ್ನು ವಿಮಾನ ನಿಲ್ದಾಣದ ಆವರಣದಿಂದ ಹೊರಗೆ ಹತ್ತಿರದ ಸ್ಥಳಕ್ಕೆ ಸ್ಥಳಾಂತರಿಸಲು ಕಳೆದ ಹಲವು ದಶಕಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಲೇ ಇವೆ. ಆದರೆ, ಸ್ಥಳೀಯ ಮಸೀದಿ ಸಮಿತಿ ಮತ್ತು ಸಮುದಾಯದ ವಿರೋಧದಿಂದಾಗಿ ಪ್ರತಿ ಬಾರಿಯೂ ಈ ಪ್ರಯತ್ನ ವಿಫಲವಾಗುತ್ತಿದೆ. ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಬಿಕ್ಕಟ್ಟು ಬಗೆಹರಿಯಲೇಬೇಕಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಸೌಂದರ್ಯದ ಮತ್ಸರಕ್ಕೆ 4 ಅಮಾಯಕ ಮಕ್ಕಳ ಬಲಿ : ಸ್ವಂತ ಮಗನನ್ನೂ ಬಿಡದ ಹರ್ಯಾಣದ ಮಹಿಳೆ!


















