ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಕ್ರಮ ಮದರಸಾಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಕೇವಲ 15 ದಿನಗಳಲ್ಲಿ 50ಕ್ಕೂ ಅಧಿಕ ಅಕ್ರಮ ಮದರಸಾಗಳಿಗೆ ಬೀಗ ಜಡಿಯಲಾಗಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಕಾನೂನು ಕ್ರಮವು ಇನ್ನೂ ತೀವ್ರವಾಗಲಿದೆ ಎಂದು ತಿಳಿದುಬಂದಿದೆ.
ಡೆಹ್ರಾಡೂನ್, ವಿಕಾಸ್ ನಗರದಲ್ಲಿ 12 ಮದರಸಾಗಳಿಗೆ ಬೀಗ ಜಡಿಯಲಾಗಿದೆ. ಇನ್ನು, ಖಾತಿಮಾದಲ್ಲಿ 9 ಮದರಸಾಗಳನ್ನು ಮುಚ್ಚಲಾಗಿದೆ. ರಾಜ್ಯದ ಹಲವೆಡೆ ಇದೇ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. 50ಕ್ಕೂ ಅಧಿಕ ಮದರಸಾಗಳಿಗೆ ಈಗ ಬೀಗ ಹಾಕಲಾಗಿದೆ. ಇದಕ್ಕೂ ಮೊದಲು ಕೂಡ ಇಂತಹದ್ದೇ ಅಭಿಯಾನದ ಮೂಲಕ 32 ಮದರಸಾಗಳಿಗೆ ಬೀಗ ಜಡಿಯಲಾಗಿತ್ತು.
ಬೀಗ ಜಡಿಯಲು ಕಾರಣ?
ಮದರಸಾಗಳಲ್ಲಿ ಶಿಕ್ಷಣದ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಸಂಚು ರೂಪಿಸುತ್ತಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಕಾನೂನಿನ ಅನ್ವಯ ನೋಂದಣಿ ಮಾಡಿಕೊಳ್ಳದ ಮದರಸಾಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. “ಉತ್ತರಾಖಂಡದ ಕಾನೂನು ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆ ತರಲು ಪ್ರಯತ್ನಿಸುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಸರ್ಕಾರದ ಕ್ರಮವನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಖಂಡಿಸಿದ್ದಾರೆ.
“ಉತ್ತರಾಖಂಡ ಸರ್ಕಾರವು ಪೂರ್ವಗ್ರಹಪೀಡಿತವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರದ ಕ್ರಮದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಕೂಡಲೇ ಸರ್ಕಾರವು ತನ್ನ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳಬೇಕು” ಎಂದು ಮಾಯಾವತಿ ಅವರು ಆಗ್ರಹಿಸಿದ್ದಾರೆ.