ಧಾರವಾಡ : ಕಾಶ್ಮೀರದಲ್ಲಿ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ನಾವು ರಾಜಕೀಯ ಮಾತನಾಡುವುದಿಲ್ಲ. ಈಗ ರಾಜಕೀಯ ಮಾತನಾಡುವುದು ಸರಿಯಲ್ಲ. ಪುಲ್ವಾಮ್ ಬಳಿಕ ಜನ ಇಂತಹ ಘಟನೆಗಳನ್ನು ಮರೆತಿದ್ದರು. ಈಗ ಮತ್ತೆ ಮರುಕಳಿಸುವಂತಾಗಿದೆ. ಜಮ್ಮು-ಕಾಶ್ಮೀರದಲ್ಲಿ 2000 ಕ್ಕಿಂತ ಹೆಚ್ಚು ಇಂತಹ ಘಟನೆಗಳು ಆಗಿವೆ. ಕಳೆದ ಹತ್ತು ವರ್ಷಗಳಲ್ಲಿ 800ಕ್ಕೂ ಅಧಿಕ ಸಣ್ಣ ಸಣ್ಣ ಬಾಂಬ್ ಸ್ಫೋಟವಾಗಿವೆ. ಇದರ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗಿಲ್ಲ ಎಂದಿದ್ದಾರೆ.
ಇವತ್ತು ಈ ವಿಷಯದಲ್ಲಿ ರಾಜಕೀಯ ಟೀಕೆ ಸರಿಯಲ್ಲ. ಆದರೆ ಸಂದರ್ಭ ಬಂದಾಗ ಮಾತನಾಡುತ್ತೇವೆ. ಪುಲ್ವಾಮ್ ದಾಳಿ ಆಗಿತ್ತು. ಅದರಲ್ಲಿ ಎಷ್ಟು ಜನರನ್ನು ಹಿಡಿದಿದ್ದಾರೆ? 300 ಕೆಜಿ RDX ಬಂದಿತ್ತು. ಅದು ಎಲ್ಲಿಂದ ಬಂತು ಎಂಬ ಮಾಹಿತಿ ಸಿಕ್ಕಿಲ್ಲ. ಅಲ್ಲಿನ ರಾಜ್ಯಪಾಲರು ಸಂಪೂರ್ಣ ಮಾಹಿತಿ ಕೊಟ್ಟಿದ್ದರು. ಆದರೂ ಆ ಬಗ್ಗೆ ಚರ್ಚೆ ಆಗಿಲ್ಲ. ಈಗ ಈ ರಾಜಕೀಯ ಮಾತನಾಡುವುದಿಲ್ಲ. ಅಲ್ಲಿ ನಡೆದಿರುವ ಕಾರ್ಯಾಚರಣೆ ಸುರಕ್ಷಿತವಾಗಿ ಆಗಲಿ. ಯಾವುದೇ ರಾಜ್ಯದ ಜನ ಇದ್ದರೂ ಸುರಕ್ಷಿತವಾಗಿ ಮರಳಿ ಬರಲಿ. ಭಾರತೀಯ ಸೇನೆ ಉಗ್ರರ ದಾಳಿ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.



















