ರಾಯಚೂರು: ಮಾಂಸದೂಟ ಸೇವಿಸಿದ ಪರಿಣಾಮ ಸುಮಾರು 20ಕ್ಕೂ ಅಧಿಕ ಜನರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಲಿಂಗಸುಗೂರು ತಾಲೂಕಿನ ಪರಂಪುರ ತಾಂಡಾದಲ್ಲಿ ಈ ಘಟನೆ ನಡೆದಿದೆ. ತಾಂಡಾ ನಿವಾಸಿಗಳು ಸೇರಿಕೊಂಡು ದೇವರ ಕಾರ್ಯಕ್ಕಾಗಿ ಮಾಂಸದ ಅಡುಗೆ ಸಿದ್ಧಪಡಿಸಿದ್ದರು. ಎಲ್ಲರೂ ಸೇರಿ ಮಧ್ಯಾಹ್ನ ಊಟ ಸೇವಿಸಿದ್ದಾರೆ. ಆದರೆ, ಊಟದ ನಂತರ ಮಕ್ಕಳು, ಹಿರಿಯರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಆದರೆ, ಊಟ ಮಾಡಿದವರು ಕೂಡಲೇ ಅಸ್ವಸ್ಥರಾದವರನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
250 ಕುಟುಂಬಗಳು ವಾಸಿಸುವ ತಾಂಡ ಇದಾಗಿದ್ದು, ಇಂದು ತಾಂಡದಲ್ಲಿ ದೇವರ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಕಾರ್ಯ ಮುಗಿದ ಮೇಲೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಅಮರೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸುಮಾರು 10 ಜನರು ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನುಳಿದವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.