ಬೆಂಗಳೂರು : ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದು, 9 ದಿನಗಳ ಕಾಲ ಉಭ ಸದನಗಳಲ್ಲಿ ಮುಂಗಾರು ಅಧಿವೇಶನ ನಡೆಯಲಿದೆ. ಆ.11ರಿಂದ ಆ.22 ರವರೆಗೆ ಅಧಿವೇಶನ ನಡೆಯಲಿದೆ.
ಉಭಯ ಸದನಗಳ ಸಭಾಧ್ಯಕ್ಷರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.
ಕಲಾಪದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ-ಜೆಡಿಎಸ್ ಆರ್.ಸಿ. ಬಿ ವಿಜಯೋತ್ಸವದ ವೇಳೆ ನಡೆದಿರುವುದರ ಕಾಲ್ತುಳಿತಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಹೊರಬೇಕು ಎಂದು ಸೌಧದ ಮುಂದಿರುವ ಮಹಾತ್ಮಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಇನ್ನು, ಕಳೆದ ರಾಜ್ಯ ಬಜೆಟ್ ಅಧಿವೇಶನದ ವೇಳೆ ಬಿಜೆಪಿಯ 18 ಮಂದಿ ಶಾಸಕರನ್ನು ಸಭಾಧ್ಯಕ್ಷ ಯು. ಟಿ ಖಾದರ್ ಅಮಾನತುಗೊಳಿಸಿ, 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದಿದ್ದರು. ಈ ನಿರ್ಣಯವನ್ನು ಮೇ 25ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿತ್ತು. ಈ ಕುರಿತ ಸ್ಥಿರೀಕರಣ ಪ್ರಸ್ತಾವ ಮೊದಲ ದಿನ ಮಂಡನೆಯಾಗಲಿದ್ದು, ವಿಧಾನಸಭೆ ಅನುಮೋದಿಸಲಿದೆ.
ಇನ್ನು, ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಕೊರತೆ, ಶಾಸಕರಿಗೆ ಅನುದಾನ ಬಿಡುಗಡೆಯಲ್ಲಿನ ತಾರತಮ್ಯ, ಜಾತಿ ಗಣತಿ ಮರು ಸಮೀಕ್ಷೆ, ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ. ರಸಗೊಬ್ಬರದ ಅಭಾವ, ಪರಿಶಿಷ್ಟರ ಒಳಮೀಸಲಾತಿ ವರದಿ ಸಲ್ಲಿಕೆ ಪರ-ವಿರೋಧ, ಮತ ಕಳ್ಳತನದ ಆರೋಪವು ಸೇರಿದಂತೆ ಹಲವು ವಿಚಾರಗಳು ಉಭಯ ಸದನಗಳಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ.
ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸನ್ನದ್ಧಗೊಂಡಿವೆ. ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಆಡಳಿತಾರೂಢ ಕಾಂಗ್ರೆಸ್ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಡಳಿತ ಕಾಂಗ್ರೆಸ್ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವುದಕ್ಕೆ ಪ್ರತಿಪಕ್ಷಗಳ ಶಾಸಕರಲ್ಲಿ ಬೇಕಾದಷ್ಟ ಸರಕುಗಳು ಸುಲಭ ಗ್ರಾಸವಾಗಿ ದೊರಕಿದ್ದು, ಉಭಯ ಕಲಾಪಗಳಲ್ಲಿ ಚರ್ಚೆ ನಡೆಯುತ್ತದೋ, ಕಲಹ ನಡೆಯುತ್ತದೋ ಕಾದು ನೋಡಬೇಕಿದೆ.
“ಈ ಅಧಿವೇಶನದಲ್ಲಿ ಮಂಡನೆ ಆಗಲಿರುವ ಪ್ರಮುಖ ಮಸೂದೆಗಳು”
- ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ 2025
- ಕರ್ನಾಟಕ ಅಪರಾಧ ಮುಕ್ತಗೊಳಿಸುವಿಕೆ (ಉಪಬಂಧಗಳ ತಿದ್ದುಪಡಿ)ಮಸೂದೆ 2025
- ನೋಂದಣಿ(ಕರ್ನಾಟಕ ತಿದ್ದುಪಡಿ)ಮಸೂದೆ, 2025
- ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಅನುಕೂಲತೆ ಮತ್ತು ನಿಯಂತ್ರಣಾ)(ತಿದ್ದುಪಡಿ) ಮಸೂದೆ 2025
- ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ(ತಿದ್ದುಪಡಿ) ಮಸೂದೆ 2025
- ಕರ್ನಾಟಕ ಬಂದರು(ಲ್ಯಾಂಡಿಂಗ್ ಮತ್ತು ಶಿಪ್ಪಿಂಗ್ ಫೀಸ್) (ತಿದ್ದುಪಡಿ) ಮಸೂದೆ 2025
- ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ಮಸೂದೆ 2025
- ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು(ತಿದ್ದುಪಡಿ) ಮಸೂದೆ 2025
- ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ಮಸೂದೆ 2025
- ಗ್ರೇಟರ್ ಬೆಂಗಳೂರು ಆಡಳಿತ(ತಿದ್ದುಪಡಿ) ಮಸೂದೆ 2025
- ಕರ್ನಾಟಕ ಅತ್ಯವಶ್ಯಕ ಸೇವೆಗಳ ನಿರ್ವಹಣಾ
(ತಿದ್ದುಪಡಿ) ಮಸೂದೆ 2025 - ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ)ಮಸೂದೆ 2025
- ಕರ್ನಾಟಕ ಅಂತರ್ಜಲ(ಅಭಿವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣ) (ತಿದ್ದುಪಡಿ) ಮಸೂದೆ-2025


















