ನವದೆಹಲಿ: ಭಾರತಕ್ಕೆ ಮತ್ತೊಮ್ಮೆ ಮಂಕಿ ಪಾಕ್ಸ್ ಆತಂಕ ಶುರುವಾಗಿದೆ.
ವಿದೇಶದಿಂದ ಬಂದ ಪ್ರಯಾಣಿಕರೊಬ್ಬರಲ್ಲಿ ಮಂಕಿ ಪಾಕ್ಸ್ ವೈರಾಣು ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಶಂಕಿತ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿ ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಆರೋಗ್ಯ ಇಲಾಖೆ ಸಮಗ್ರ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದೆ. ಆದರೆ, ಮಂಕಿ ಪಾಕ್ಸ್ ಸೋಂಕು ತಗುಲಿರುವ ಕುರಿತು ಮಾಹಿತಿ ಖಚಿತಪಡಿಸಿಲ್ಲ.
ಶಂಕಿತ ಸೋಂಕಿತನನ್ನು ತಜ್ಞ ವೈದ್ಯರು ಐಸೋಲೇಷನ್ ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈತನಿಂದ ಬೇರೆಯವರಿಗೆ ಸೋಂಕು ಹರಡಿರುವ ಸಾಧ್ಯತೆ ಕಮ್ಮಿ ಇದೆ ಎಂದೂ ವೈದ್ಯರು ಹೇಳಿದ್ದಾರೆ.
ಮಂಕಿ ಪಾಕ್ಸ್ ರೋಗ ಲಕ್ಷಣ ಇರುವ ವ್ಯಕ್ತಿಯ ರಕ್ತ ಹಾಗೂ ಇನ್ನಿತರ ಮಾದರಿಗಳನ್ನು ತೆಗೆದುಕೊಂಡಿರುವ ವೈದ್ಯರು ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಒಂದು ವೇಳೆ ಮಂಕಿ ಪಾಕ್ಸ್ ವೈರಾಣು ಸೋಂಕು ತಗುಲಿರುವುದು ದೃಢಪಟ್ಟರೆ ಭಾರತದಲ್ಲಿ ದಾಖಲಾದ ಮೊಟ್ಟ ಮೊದಲ ಮಂಕಿ ಪಾಕ್ಸ್ ಪ್ರಕರಣ ಇದಾಗಲಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಕೂಡ ಈ ಪ್ರಕರಣದ ಕುರಿತಾಗಿ ತನಿಖೆ ನಡೆಯುತ್ತಿದ್ದು, ಯಾರಿಗೆಲ್ಲಾ ಸೋಂಕು ತಗುಲುವ ಭೀತಿ ಇದೆ. ಸದ್ಯದ ಮಟ್ಟಿಗೆ ಸಂಭಾವ್ಯ ಸೋಂಕಿತ ಹೊರತುಪಡಿಸಿ ಯಾವುದೇ ವ್ಯಕ್ತಿಗೆ ಸೋಂಕು ತಗುಲಿರುವ ಆತಂಕ ಇಲ್ಲ ಎಂದು ಇಲಾಖೆ ಹೇಳಿದೆ.
ಭಾರತ ದೇಶವು ಮಂಕಿ ಪಾಕ್ಸ್ ರೋಗ ಹರಡದಂತೆ ತಡೆಯಲು ಸರ್ವ ಸನ್ನದ್ಧವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಈ ವೈರಲ್ ಇದ್ದರೆ, ಅತಿಯಾದ ಜ್ವರ, ಶೀತ, ನೆಗಡಿ, ಕೆಮ್ಮು, ತಲೆನೋವು ಹಾಗೂ ಮೈ ಕೈ ನೋವು ಕಂಡು ಬರುತ್ತದೆ.