ಹಾಸನ : ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ವಿರುದ್ಧ ಆಡಿಯೋ ದಾಖಲೆ ಸೇರಿ ಪೂರಕ ದಾಖಲೆಗಳ ಸಹಿತ ದೂರು ದಾಖಲಾಗಿದೆ. ಮಾತ್ರವಲ್ಲದೆ, ಹಾಸನ ಸಂಸದ ಶ್ರೇಯಸ್ ಪಟೇಲ್ ವಿರುದ್ಧವೂ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ದೂರು ಸಲ್ಲಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದ ದೇವರಾಜೇಗೌಡ, ಆಡಿಯೋ ಲಭ್ಯವಾದ ಬೆನ್ನಲೆ ನಾನು ಸಿಬಿಐಗೆ ದೂರು ನೀಡಿದ್ದೆ. ಚುನಾವಣಾ ಆಯೋಗಕ್ಕೆ ಸಿಬಿಐ ದೂರು ವರ್ಗಾಯಿಸಿದೆ. ಆಯೋಗದಿಂದ ಮಾಹಿತಿ ನೀಡುವಂತೆ ನನಗೆ ಮಿಂಚಂಚೆ(ಈಮೇಲ್) ಬಂದಿತ್ತು. ಈ ಹಿನ್ನೆಲೆಯಲ್ಲಿ ನಾನು ಇಂದು ಖುದ್ದು ದೆಹಲಿಗೆ ಆಗಮಿಸಿ ದಾಖಲೆಗಳನ್ನು ಸಲ್ಲಿಸಿದ್ದೇನೆ. ಇದರಲ್ಲಿ ಸಿಎಂ, ಡಿಸಿಎಂ ಹೆಸರು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
“ಏನಿದು ಪ್ರಕರಣ ?”
2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದ ಸಂಸದ ಶ್ರೇಯಸ್ ಎಮ್ ಪಟೇಲ್ ಪರವಾಗಿ ಜಿಲ್ಲೆಯಲ್ಲಿ ಹಣ ಹಂಚಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯಸಭಾ ಸದಸ್ಯ ಎನ್ ಚಂದ್ರಶೇಖರ್ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ” ಎಂದು ಶಾಸಕ ಶಿವಲಿಂಗೇಗೌಡ ಅವರು ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.
ವೈರಲ್ ಆದ ಆಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಇವರುಗಳ ವಿರುದ್ಧ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.