ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಿಗ್ಗಜ ಇಮ್ರಾನ್ ಖಾನ್ ಅವರ ಪ್ರಾಣಕ್ಕೆ ಅಪಾಯವಿದ್ದು, ಜೈಲಿನಲ್ಲಿಯೇ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಅವರ ಸಹೋದರಿಯರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಚಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಹಾಗೂ ಗೃಹ ಸಚಿವ ಮೊಹ್ಸಿನ್ ನಖ್ವಿ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಶಾಮೀಲಾಗಿದ್ದಾರೆ ಎಂದು ಅವರು ದೂರಿರುವುದು ಸಂಚಲನ ಮೂಡಿಸಿದೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರ ಸಹೋದರಿಯರಾದ ಡಾ. ಉಜ್ಮಾ ಖಾನ್ ಮತ್ತು ಅಲೀಮಾ ಖಾನ್ ಈ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಹತ್ಯೆಗೆ ಸ್ಕೆಚ್?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಉಜ್ಮಾ ಖಾನ್, “ನನ್ನನ್ನು ಹತ್ಯೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸ್ವತಃ ಇಮ್ರಾನ್ ಖಾನ್ ಅವರೇ ನಮಗೆ ತಿಳಿಸಿದ್ದಾರೆ. ಅಧಿಕಾರದಲ್ಲಿರುವ ಪ್ರಮುಖ ವ್ಯಕ್ತಿಗಳು ನಮ್ಮ ಕುಟುಂಬದ ಮೇಲೂ ಒತ್ತಡ ಹೇರುತ್ತಿದ್ದಾರೆ,” ಎಂದು ಆರೋಪಿಸಿದರು. ಅಲೀಮಾ ಖಾನ್ ಮಾತನಾಡಿ, “ಮೊಹ್ಸಿನ್ ನಖ್ವಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಇಮ್ರಾನ್ ಖಾನ್ ಅಥವಾ ನಮಗೆ ಏನಾದರೂ ಆದರೆ, ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
ಚಿಕಿತ್ಸೆಗೆ ನಕಾರ
ಇಮ್ರಾನ್ ಖಾನ್ ಅವರ ಬಲಗಣ್ಣಿನ ದೃಷ್ಟಿ ಶೇ. 85ರಷ್ಟು ಕಡಿಮೆಯಾಗಿದೆ ಎನ್ನಲಾಗಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಸರ್ಕಾರ ನಿರಾಕರಿಸುತ್ತಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. “ನಾವು ನಂಬುವ ವೈದ್ಯರಿಂದ ಚಿಕಿತ್ಸೆ ಕೊಡಿಸಲು ಅವಕಾಶ ನೀಡುತ್ತಿಲ್ಲ. ನಮ್ಮ ಸಂಬಂಧಿ ನೌಶೇರ್ವಾನ್ ಬುರ್ಕಿ ಅವರ ಹೆಸರನ್ನು ಸೂಚಿಸಿದರೂ ಸರ್ಕಾರ ತಿರಸ್ಕರಿಸಿದೆ,” ಎಂದು ಅಲೀಮಾ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಪರ ನಿಂತ ಕ್ರಿಕೆಟ್ ದಿಗ್ಗಜರು
ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್ ಸೇರಿದಂತೆ ವಿಶ್ವದ 14 ಮಂದಿ ಮಾಜಿ ಕ್ರಿಕೆಟ್ ದಿಗ್ಗಜರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಮ್ರಾನ್ ಖಾನ್ ಕೇವಲ ಮಾಜಿ ಪ್ರಧಾನಿಯಲ್ಲ, ಜಾಗತಿಕ ಕ್ರಿಕೆಟ್ ಐಕಾನ್ ಆಗಿದ್ದು, ಅವರಿಗೆ ಜೈಲಿನಲ್ಲಿ ಸೂಕ್ತ ಗೌರವ ಮತ್ತು ಮಾನವೀಯ ಮತ್ತು ನ್ಯಾಯಯುತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ‘ಆಗಿರೋದು ಆಗಿ ಹೋಗಿದೆ’ | ಪ್ರೇಯಸಿಯ ಕೊಂದು ಶ*ವ ಸಂಭೋಗ ನಡೆಸಿದ್ದ ಇಂದೋರ್ ಆರೋಪಿಯ ಅಚ್ಚರಿಯ ಹೇಳಿಕೆ!



















