ಮುಂಬೈ: ಭ್ರಾತೃತ್ವದ ಸಂಕೇತವಾಗಿರುವ ರಕ್ಷಾಬಂಧನ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರು ಪ್ರಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರ ಜೊತೆ ರಕ್ಷಾಬಂಧನ ಆಚರಿಸಿದ್ದಾರೆ.
ಜನೈ ಭೋಸ್ಲೆ ಅವರು ಮೊಹಮ್ಮದ್ ಸಿರಾಜ್‌ಗೆ ರಾಖಿ ಕಟ್ಟಿ, ಭ್ರಾತೃತ್ವ ಸಂಬಂಧವನ್ನು ಸಾರಿದರು. ಈ ಸುಂದರ ಕ್ಷಣದ ವಿಡಿಯೋವನ್ನು ಸಿರಾಜ್ ಮತ್ತು ಜನೈ ಭೋಸ್ಲೆ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ರಾಖಿ ಕಟ್ಟಿದ ನಂತರ ಜನೈ, ಸಿರಾಜ್‌ಗೆ ಬ್ರಾಸ್ ಲೈಟ್ ಉಡುಗೊರೆಯಾಗಿ ನೀಡಿದರು.
ವೈರಲ್ ವದಂತಿಗಳಿಗೆ ಸ್ಪಷ್ಟನೆ
ಈ ವರ್ಷದ ಆರಂಭದಲ್ಲಿ ಜನೈ ಭೋಸ್ಲೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಾಗ ಮೊಹಮ್ಮದ್ ಸಿರಾಜ್ ಅವರೊಂದಿಗೆ ತೆಗೆದ ಫೋಟೊವನ್ನು ಹಂಚಿಕೊಂಡಿದ್ದರು. ಈ ಫೋಟೊವನ್ನು ಬಳಸಿಕೊಂಡು ಕೆಲವು ನೆಟ್ಟಿಗರು ಸಿರಾಜ್ ಮತ್ತು ಜನೈ ನಡುವೆ ಪ್ರೀತಿಯ ಸಂಬಂಧವಿದೆ ಎಂದು ವದಂತಿ ಹಬ್ಬಿಸಿದ್ದರು.
ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದಾಗ, ಸಿರಾಜ್ ಈ ಎಲ್ಲ ವದಂತಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದರು. ನಂತರ, ಅದೇ ಫೋಟೊವನ್ನು ಹಂಚಿಕೊಂಡಿದ್ದ ಜನೈ ಭೋಸ್ಲೆ, “ಸಿರಾಜ್ ನನ್ನ ಪ್ರೀತಿಯ ಸಹೋದರ” ಎಂದು ಬರೆದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಇದೀಗ ರಕ್ಷಾಬಂಧನ ಹಬ್ಬವನ್ನು ಒಟ್ಟಾಗಿ ಆಚರಿಸುವ ಮೂಲಕ, ಇವರಿಬ್ಬರ ನಡುವಿನ ಸಂಬಂಧ ಸಹೋದರ-ಸಹೋದರಿಯರಂತೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಕ್ರಿಕೆಟ್ ವಿಷಯಕ್ಕೆ ಬಂದರೆ, ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಐದು ಪಂದ್ಯಗಳಿಂದ ಅವರು ಒಟ್ಟು 23 ವಿಕೆಟ್‌ಗಳನ್ನು ಉರುಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.