ಬೆಂಗಳೂರು: ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಅವರಿಗೆ ಸಂಕಷ್ಟ ಎದುರಾಗಿದೆ. ಬಹುಕೋಟಿ ರೂಪಾಯಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು (ಎಸ್ಐಟಿ) ಮೊಹಮ್ಮದ್ ನಲಪಾಡ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಅದರಲ್ಲೂ, ಹ್ಯಾಕರ್ ಶ್ರೀಕಿ ಜತೆ ನಂಟು ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾದ ಕಾರಣ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 7ರಂದು ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಎಸ್ಐಟಿ ಸೂಚಿಸಿದೆ. ತನಿಖೆಯ ಪ್ರಕಾರ, ನಲಪಾಡ್ ಅವರು ಹ್ಯಾಕರ್ ಶ್ರೀಕಿ ಜತೆ ಸಂಪರ್ಕ ಹೊಂದಿದ್ದರು. ಅಲ್ಲದೆ, ಅವರ ಜತೆ ವ್ಯವಹಾರಿಕ ಸಂಬಂಧವೂ ಇತ್ತು. ಇದೇ ಕಾರಣಕ್ಕಾಗಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಮೊಹಮ್ಮದ್ ನಲಪಾಡ್ ಅವರಿಗೆ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಇದಕ್ಕೂ ಮೊದಲು ಕೂಡ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿದ್ದರು. ಸಿಐಡಿಯ ಇ-ಪ್ರೊಕ್ಯೂರ್ ಮೆಂಟ್ ಜಾಲತಾಣವನ್ನು ಹ್ಯಾಕ್ ಮಾಡಿ 1 ಕೋಟಿ ರೂ. ವಂಚಿಸಿರುವುದು ಸೇರಿ ಹಲವು ಪ್ರಕರಗಣಲ್ಲಿ ಪೊಲೀಸರು ಹ್ಯಾಕರ್ ಶ್ರೀಕಿಯನ್ನು ಬಂಧಿಸಿದ್ದರು. ಈಗ ಇದೇ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಅವರಿಗೆ ನೋಟಿಸ್ ನೀಡಲಾಗಿದೆ.
ಕಾಂಗ್ರೆಸ್ ನಾಯಕನಿಗೆ ಬಂಧನದ ಭೀತಿ
ಎಸ್ಐಟಿ ನೋಟಿಸ್ ಅಷ್ಟೇ ಅಲ್ಲ, ಮೊಹಮ್ಮದ್ ನಲಪಾಡ್ ಅವರಿಗೆ ಬಂಧನದ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ. ಬಿಟ್ ಕಾಯಿನ್ ಹಗರಣದಲ್ಲಿ ನಲಪಾಡ್ ಅವರನ್ನು ಆರೋಪಿ ಎಂಬುದಾಗಿ ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ವಿಚಾರಣೆ ನಡೆಸಿದ ಬಳಿಕ ಎಸ್ಐಟಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಅವರನ್ನು ವಶಕ್ಕೆ ಪಡೆದರೂ ಅಚ್ಚರಿ ಇಲ್ಲ ಎನ್ನಲಾಗಿದೆ.