ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರರ ದಾಳಿಯ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ದೇಶದ ನಾಗರಿಕರನ್ನು ಹತ್ಯೆಗೈದ ಉಗ್ರರನ್ನು ಹುಡುಕಿ ಹುಡುಕಿ ಕೊಲೆ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಪಾಕಿಸ್ತಾನಕ್ಕೂ ತಕ್ಕ ಪಾಠ ಕಲಿಸಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ. ಇದರ ಮಧ್ಯೆಯೇ, ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಧನ್ಯವಾದ ಹೇಳಿದ ಜಾರ್ಖಂಡ್ ನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ ಮಿಲ್ಲತ್ ನಗರದ ಮೊಹಮ್ಮದ್ ನೌಶಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಗ್ರರ ದಾಳಿಯನ್ನು ಬೆಂಬಲಿಸುತ್ತ, “ಧನ್ಯವಾದ ಪಾಕಿಸ್ತಾನ. ಧನ್ಯವಾದ ಲಷ್ಕರೆ ತಯ್ಬಾ” ಎಂದು ಪೋಸ್ಟ್ ಮಾಡಿದ್ದ. ಇದಾದ ಬಳಿಕ ಮೊಹಮ್ಮದ್ ನೌಶಾದ್ ವಿರುದ್ಧ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕ್ರಮ ತೆಗೆದುಕೊಂಡಿದೆ. ಸಿಂಧೂ ನದಿ ನೀರಿನ ಒಪ್ಪಂದ ರದ್ದುಗೊಳಿಸುವುದು, ವಾಘಾ-ಅಟಾರಿ ಗಡಿ ಬಂದ್, ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಯಲ್ಲಿ ಭಾರತವನ್ನು ತೊರೆಯಬೇಕು, ಭಾರತದಲ್ಲಿರುವ ಪಾಕಿಸ್ತಾನದ 25 ರಾಜತಾಂತ್ರಿಕ ಅಧಿಕಾರಿಗಳನ್ನು ವಜಾಗೊಳಿಸಿರುವುದು ಸೇರಿ ಹಲವು ಕ್ರಮ ತೆಗೆದುಕೊಳ್ಳಲಾಗಿದೆ.
ಈಗಾಗಲೇ ಪಾಕಿಸ್ತಾನದ ಪ್ರಜೆಗಳಿಗೆ ನೀಡಿರುವ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಹಾಗೆಯೇ, ಮುಂದಿನ ದಿನಗಳಲ್ಲೂ ಪಾಕ್ ಪ್ರಜೆಗಳಿಗೆ ವೀಸಾ ನೀಡುವುದಿಲ್ಲ ಎಂದು ಭಾರತ ತಿಳಿಸಿದೆ. ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ವಿದೇಶಿ ನಾಗರಿಕರು ಸೇರಿ 26 ಮಂದಿ ಮೃತಪಟ್ಟಿದ್ದಾರೆ.



















