ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ ಬಳಿಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಭಾರತದಲ್ಲಿರುವ ಪಾಕ್ ಪ್ರಜೆಗಳನ್ನು ಕಳುಹಿಸುವುದು, ಅಟಾರಿ-ವಾಘಾ ಗಡಿ ಬಂದ್ ಮಾಡಿರುವುದು, ಸಿಂಧೂ ಜಲ ಒಪ್ಪಂದಕ್ಕೆ ತಡೆಯಾಜ್ಞೆ ಸೇರಿ ಹಲವು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಲ್ಲೂ, ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ಕಾರಣ ಪಾಕಿಸ್ತಾನದ ಕೃಷಿಗೆ ಭಾರಿ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ 1960ರಲ್ಲಿ ಸಿಂಧೂ ಜಲ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರ ಅನ್ವಯ ಭಾರತವು ಸಿಂಧೂ ನದಿ ಸೇರಿ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಬಿಡುತ್ತಿದೆ. ಈಗ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರವು ಸಿಂಧೂ ಜಲ ಒಪ್ಪಂದದ ಅಸ್ತ್ರ ಬಳಸಿರುವ ಕಾರಣ ಪಾಕಿಸ್ತಾನದ ಬಹುತೇಕ ಕೃಷಿ ಭೂಮಿಯು ಪಾಳು ಬೀಳಲಿದೆ ಎಂದು ತಿಳಿದುಬಂದಿದೆ.
ಸಿಂಧೂ ಸೇರಿ ಆರು ನದಿಗಳ ನೀರನ್ನೇ ಪಾಕಿಸ್ತಾನದ ಕೃಷಿಯು ಅವಲಂಬಿಸಿದೆ. ಆದರೆ, ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರವು ಆರೂ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಹರಿಯುವುದರಿಂದ ತಡೆಯಲಾಗುತ್ತದೆ. ಇದರಿಂದಾಗಿ ಪಾಕಿಸ್ತಾನದ ಶೇ.80ಷ್ಟು ಕೃಷಿಗೆ ಹೊಡೆತ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ವ್ಯಾಪಾರಕ್ಕೂ ಬೀಳಲಿದೆ ಹೊಡೆತ
ಅಟಾರಿ-ವಾಘಾ ಗಡಿಯನ್ನೂ ಭಾರತ ಬಂದ್ ಮಾಡುವ ಕಾರಣ ಪಾಕಿಸ್ತಾನದ ವ್ಯಾಪಾರಕ್ಕೆ ಭಾರಿ ಹೊಡೆತ ಬೀಳಲಿದೆ. ಪಾಕಿಸ್ತಾನದ ವ್ಯಾಪಾರ ವಹಿವಾಟಿಗೆ ವಾಘಾ-ಅಟಾರಿ ಗಡಿ ಮುಖ್ಯ ರಹದಾರಿ ಎನಿಸಿದೆ. 2023-24ರಲ್ಲಿ ₹3,886.53 ಕೋಟಿ ಮೌಲ್ಯದ ವ್ಯಾಪಾರ ನಡೆದಿತ್ತು. 6,871 ಸರಕುಗಳು ಈ ಮಾರ್ಗದಲ್ಲಿ ಸಾಗಣೆ ಆಗಿದ್ದವು. ಈಗ ಭಾರತವು ಅಟಾರಿ ಗಡಿಯನ್ನು ಮುಚ್ಚುವುದರಿಂದ, ಸರಕು ಸಾಗಣೆ ಬಾಗಿಲು ಬಂದ್ ಆದಂತಾಗುತ್ತದೆ.
ಡ್ರೈಫ್ರೂಟ್ಸ್, ಒಣಗಿದ ಖರ್ಜೂರ, ಜಿಪ್ಸಮ್, ಸಿಮೆಂಟ್, ಗಾಜು, ರಾಕ್ ಸಾಲ್ಟ್, ಔಷಧೀಯ ಸಸ್ಯಗಳು ಪಾಕಿಸ್ತಾನದಿಂದ ಭಾರತಕ್ಕೆ ಸರಬರಾಜಾಗುತ್ತವೆ. ಇವುಗಳು ನಿಲ್ಲುವುದರಿಂದ ಪಾಕಿಸ್ತಾನದ ಸ್ಥಳೀಯ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಒಟ್ಟಾರೆಯಾಗಿ ಭಾರತದ ನಿರ್ಧಾರಗಳಿಂದ ಪಾಕಿಸ್ತಾನದ ಜಿಡಿಪಿಯ ಶೇ.10-20ರಷ್ಟು ಪ್ರಮಾಣವು ಕುಸಿಯಲಿದೆ ಎಂದು ಹೇಳಲಾಗುತ್ತಿದೆ.