ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೂರಾರು ಕಿಲೋಮೀಟರ್ ಸಂಚರಿಸಬೇಕಾದರೆ, ಸಾವಿರಾರು ರೂಪಾಯಿ ಟೋಲ್ ಕಟ್ಟಬೇಕಾಗುತ್ತದೆ. ಪ್ರತಿ ಬಾರಿ ಟೋಲ್ ಕಟ್ಟುವಾಗಲೂ ಇಷ್ಟು ಹಣ ಖರ್ಚಾಗುತ್ತದೆಯಲ್ಲ ಎಂಬ ಬೇಸರ ಮೂಡುತ್ತದೆ. ವಾಹನ ಸವಾರರ ಈ ಬೇಸರವನ್ನು ಕಳೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೌದು, ಶೀಘ್ರದಲ್ಲೇ ದೇಶಾದ್ಯಂತ ಟೋಲ್ ಗೇಟ್ ಗಳಲ್ಲಿ ರಿಯಾಯಿತಿ ದೊರೆಯಲಿದೆ.
ಟೋಲ್ ಸಂಗ್ರಹದ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಗೆ ಉತ್ತರ ನೀಡಿದ್ದಾರೆ. “ವಾಹನ ಸವಾರರ ನಿರೀಕ್ಷೆಗಳನ್ನು ನಾವು ಗಮನಿಸುತ್ತೇವೆ. ಬಜೆಟ್ ಅಧಿವೇಶನ ಮುಗಿದ ಬಳಿಕ ಕೇಂದ್ರ ಸರ್ಕಾರವು ಹೊಸ ಟೋಲ್ ನೀತಿಯನ್ನು ಘೋಷಣೆ ಮಾಡುತ್ತದೆ. ಇದರ ಅನ್ವಯ, ಜನರಿಗೆ ಟೋಲ್ ಕಟ್ಟುವಾಗ ರಿಯಾಯಿತಿ ನೀಡಲಾಗುತ್ತದೆ. ಇದಾದ ಬಳಿಕ ಟೋಲ್ ಸಂಗ್ರಹದ ಕುರಿತು ಚರ್ಚೆಯೇ ಇರುವುದಿಲ್ಲ” ಎಂದು ಗಡ್ಕರಿ ತಿಳಿಸಿದ್ದಾರೆ.
“ದೇಶಾದ್ಯಂತ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಚತುಷ್ಪಥ, ಷಟ್ಪಥ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಬ್ರಹ್ಮಪುತ್ರ ನದಿಗೇ ಸೇತುವೆ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಇದಕ್ಕೆ ಲಕ್ಷಾಂತರ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಹಾಗಾಗಿ, ವಾಹನ ಸವಾರರು ಟೋಲ್ ಕಟ್ಟುವುದು ಅನಿವಾರ್ಯವಾಗುತ್ತದೆ. ಇದರ ಮಧ್ಯೆಯೂ ನಾವು ರಿಯಾಯಿತಿ ನೀಡಲಿದ್ದೇವೆ” ಎಂದು ಹೇಳಿದ್ದಾರೆ.
64 ಸಾವಿರ ಕೋಟಿ ರೂ. ಟೋಲ್ ಸಂಗ್ರಹ
ದೇಶಾದ್ಯಂತ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದ ಪ್ರಮಾಣವು ಪ್ರತಿ ವರ್ಷ ಜಾಸ್ತಿಯಾಗುತ್ತಲೇ ಇದೆ. 2023-24ನೇ ಹಣಕಾಸು ವರ್ಷದಲ್ಲಿ 64,809 ಕೋಟಿ ರೂ. ಟೋಲ್ ಸಂಗ್ರಹಿಸಲಾಗಿತ್ತು. ಇದು 2022-23ನೇ ಸಾಲಿನಲ್ಲಿ ಸಂಗ್ರಹಿಸಿದ್ದಕ್ಕಿಂತ ಶೇ.35ರಷ್ಟು ಜಾಸ್ತಿಯಾಗಿದೆ. ದೇಶದಲ್ಲಿ 2019-20ರಲ್ಲಿ 27,503 ಕೋಟಿ ರೂ. ಟೋಲ್ ಸಂಗ್ರಹಿಸಲಾಗಿತ್ತು.