ನವದೆಹಲಿ: ಸೂಪರ್‌ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 75ನೇ ವಸಂತಕ್ಕೆ ಕಾಲಿಟ್ಟಿರುವ ರಜನಿಕಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಟ್ವೇಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.
ರಜನಿಕಾಂತ್ ಅವರ ಅಭಿನಯವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ವೈವಿಧ್ಯಮಯ ಪಾತ್ರಗಳು ಒಂದು ಬೆಂಚ್‌ಮಾರ್ಕ್ ಸೃಷ್ಟಿಸಿದೆ. ಚಲನಚಿತ್ರ ಜಗತ್ತಿನಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷ ಗಮನಾರ್ಹವಾಗಿವೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.
ಮೋದಿ ಅಲ್ಲದೇ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ದಕ್ಷಿಣ ಭಾರತದ ನಟ ಧನುಷ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ರಜನಿಕಾಂತ್ ಅವರಿಗೆ ಶುಭ ಹಾರೈಸಿದ್ದಾರೆ.
ಸದ್ಯ ಜೈಲರ್- 2 ಸಿನಿಮಾದ ಶೂಟಿಂಗ್‌ನಲ್ಲಿರುವ ತಲೈವಾ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಇಡೀ ಚಿತ್ರತಂಡ ಸಂಭ್ರಮ ವ್ಯಕ್ತಪಡಿಸಿದೆ..
ಈಗಾಗಲೇ 170ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ರಜನಿಕಾಂತ್ ಜೈಲರ್ ಚಿತ್ರದ ಸಿಕ್ವೇಲ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಸನ್ ಪಿಕ್ಚರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ.
ರಜನಿಕಾಂತ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷವಾಗಿದೆ. ಅಭಿಮಾನಿಗಳ ಸಂಭ್ರಮ ಕೂಡಾ ದುಪ್ಪಟ್ಟಾಗಿದೆ. 1975ರಲ್ಲಿ ತೆರೆಕಂಡ `ಅಪೂರ್ವ ರಾಗಂಗಳ್’ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಜನಿಕಾಂತ್ ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ.
ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಹಾಗೂ ವಿಶೇಷ ಅಭಿನಯದಿಂದ ತಮ್ಮದೇ ಛಾಪು ಮೂಡಿಸಿದ್ದಾರೆ. ತಮಿಳು ಚಿತ್ರರಂಗದಿಂದ ಬಣ್ಣದ ಬದುಕಿಗೆ ಕಾಲಿಟ್ಟ ರಜನಿಕಾಂತ್ ಕನ್ನಡ, ತೆಲುಗು, ಹಿಂದಿ ಮರಾಠಿ, ಬೆಂಗಾಲಿ, ಮಲಯಾಳಂ ಸಿನಿಮಾರಂಗದಲ್ಲಿ ಖ್ಯಾತಿ ಹೊಂದಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಾವೇ ನಟಿಸಿ, ನಿರ್ಮಿಸಿದ ಪಡೆಯಪ್ಪ ಸಿನಿಮಾ ರಿ-ರಿಲೀಸ್ ಆಗಿದೆ. ರಜನಿಕಾಂತ್ ತಮ್ಮ ಹುಟ್ಟುಹಬ್ಬವನ್ನ ಮತ್ತಷ್ಟು ವಿಶೇಷಗೊಳಿಸಿದ್ದಾರೆ.
ಇದನ್ನೂ ಓದಿ: ಗ್ರೀನ್ ಎನರ್ಜಿ ಕಾರಲ್ಲಿ ಸಂಸತ್‌ಗೆ ಬಂದ ಇಂಧನ ಸಚಿವ | ದೇಶದ ಜನರ ಚಿತ್ತ ‘ಜೋಶಿ’ಯತ್ತ!


















