ನವದೆಹಲಿ: ನರೇಂದ್ರ ಮೋದಿ ಮೂರನೇ ಬಾರಿಗೆ ಸರ್ಕಾರ ರಚಿಸಲು ಮುಂದಾಗಿದ್ದಾರೆ.
ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರ ರಚನೆ ಆಗುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಯಾರು ಸಚಿವರಾಗುತ್ತಾರೆ ಎಂಬ ಲೆಕ್ಕಾಚಾರಗಳು ಕೂಡ ಶುರುವಾಗಿವೆ.
ಇಂದು(ಭಾನುವಾರ) ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ಮೋದಿ (Narendra Modi) ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪದಗ್ರಹಣ ಮಾಡಲಿದ್ದಾರೆ. ಮೋದಿ ಅವರೊಂದಿಗೆ 30 ಜನ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದ್ದು ಪ್ರಮಾಣವಚನ ಸಮಾರಂಭಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ. ಮೋದಿ ಮಂತ್ರಿಮಂಡಲದ ಸಾಮರ್ಥ್ಯ ಬಲ 78 ರಿಂದ 81ರ ಮಧ್ಯೆ ಇರಬಹುದು ಎನ್ನಲಾಗುತ್ತಿದೆ.
ಆದರೆ, ಮಹತ್ವದ ಖಾತೆಗಳನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಳ್ಳಬಹುದು ಎನ್ನಲಾಗುತ್ತಿದೆ. ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂತಹ ಮಹತ್ವದ ಖಾತೆಗಳು ಬಿಜೆಪಿಯಲ್ಲಿಯೇ ಉಳಿಯಲಿವೆ. ಉಕ್ಕು, ನಾಗರಿಕ ವಿಮಾನಯಾನ ಮತ್ತು ಕಲ್ಲಿದ್ದಲು ಸೇರಿದಂತೆ ಇನ್ನುಳಿದ ಖಾತೆಗಳು ಮಿತ್ರ ಪಕ್ಷಗಳ ಪಾಲಾಗುವ ಸಾಧ್ಯತೆ ಇದೆ.
ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಲವು ದೇಶಗಳ ನಾಯಕರಿಗೆ ಆಹ್ವಾನ ನೀಡಲಾಗಿದ್ದು, ಆಗಮಿಸುವ ನಿರೀಕ್ಷೆ ಇದೆ. ಮೋದಿ ಪದಗ್ರಹಣ ಸಮಾರಂಭಕ್ಕೆ ಕೆಲ ವಿಶೇಷ ವ್ಯಕ್ತಿಗಳು 8 ರಿಂದ 9 ಸಾವಿರ ಜನರನ್ನು ಆಹ್ವಾನಿಸಲಾಗಿದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೋದಿ ಜೂನ್ 13ರಿಂದ 15ರವರೆಗೂ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಮೊದಲ ಪ್ರವಾಸ ಕೈಗೊಳ್ಳಲಿದ್ದಾರೆ.