ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ತಾಯಿಗೆ ನಿಂದಿಸಿದ ವಿಚಾರ ಸದ್ಯ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಬಿಹಾರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ವಿಪಕ್ಷ ಆರ್ ಜೆಡಿ ಮತ್ತು ಕಾಂಗ್ರೆಸ್ ಕೂಡ ತಿರುಗೇಟು ಕೊಟ್ಟಿದೆ.
ಇಷ್ಟು ದಿನಗಳ ಕಾಲ ವಿದೇಶದಲ್ಲಿ ನಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಬಂದಾಗ ಅಳಲು ಆರಂಭಿಸಿದ್ದಾರೆ ಎಂದು ಆ ರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ತೇಜಸ್ವಿ, “ಯಾರ ತಾಯಿಯನ್ನು ನಿಂದಿಸಬಾರದು. ನಾವು ಇದನ್ನು ಬೆಂಬಲಿಸುವುದಿಲ್ಲ; ಅದು ನ ಮ್ಮ ಸಂಸ್ಕೃತಿಯಲ್ಲಿಲ್ಲ. ಆದರೆ ಪ್ರಧಾನಿ ಮೋದಿ ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದರು ಮತ್ತು ನಿತೀಶ್ ಕುಮಾರ್ ಅವರ ಡಿಎನ್‌ಎ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು” ಎಂದು ತಿರುಗೇಟು ನೀಡಿದ್ದಾರೆ.
”ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ನನ್ನ ತಾಯಿ ಮತ್ತು ಸಹೋದರಿಯರನ್ನು ನಿಂದಿಸಿದ್ದಾರೆ. ಬಿಜೆಪಿ ವಕ್ತಾರರು ಲೈವ್ ಕೆಮರಾದಲ್ಲಿ ಮಹಿಳೆಯರನ್ನು ಪದೇ ಪದೇ ಅವಮಾನಿಸಿದ್ದಾರೆ.ಬಿಹಾರದ ಜನರಿಗೆ ಎಲ್ಲವೂ ತಿಳಿದಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
“ಚುನಾವಣ ರ್ಯಾಲಿಯ ಸಂದರ್ಭದಲ್ಲಿ ತನ್ನ ತಾಯಿಗೆ ಅವಮಾನ ಮಾಡಿದ್ದಾರೆ. ಇದು ದೇಶದ ಪ್ರತಿ ತಾಯಂದಿರು ಮತ್ತು ಸಹೋದರಿಯರಿಗೆ ಮಾಡಿದ ಅವಮಾನ” ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದರು.