ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಂಚುರಿ ಕಾವು ಜೋರಾಗಿದೆ. ಭಾರತದಲ್ಲಿ ಕ್ರಿಕೆಟ್ ಧರ್ಮವೇ ಆಗಿದ್ದು, ಅದಕ್ಕೊಬ್ಬ “ದೇವರು” ಕೂಡ ಇದ್ದಾರೆ. ಅದರಲ್ಲೂ, ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ದೇಶವೇ ಸಾಕ್ಷಿಯಾಗುತ್ತಿದೆ. ಇದರ ಮಧ್ಯೆಯೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕಿ ಬಾತ್ (Mann Ki Baat) ರೇಡಿಯೊ ಕಾರ್ಯಕ್ರಮದಲ್ಲಿ ವಿಶೇಷ ಸೆಂಚುರಿಯೊಂದನ್ನು ನೆನೆದಿದ್ದಾರೆ.
ಮನ್ ಕಿ ಬಾತ್ 119ನೇ ಸರಣಿಯ ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮೋದಿ ಮಾತನಾಡಿದರು. “ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕ್ರಿಕೆಟ್ ಜ್ವರ ಹೆಚ್ಚಾಗಿದೆ. ಆದರೆ, ನಾನಿಂದು ಕ್ರಿಕೆಟ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಇಸ್ರೊ ಕೆಲ ದಿನಗಳ ಹಿಂದಷ್ಟೇ 100ನೇ ರಾಕೆಟ್ ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇಸ್ರೊದ ಈ ಸೆಂಚುರಿಯು ದೇಶದ ಬಾಹ್ಯಾಕಾಶ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಹೊಸ ದೃಷ್ಟಿಕೋನವನ್ನೇ ನೀಡಿದೆ” ಎಂದು ತಿಳಿಸಿದರು.
ಸ್ತ್ರೀಯರಿಗೆ ಮೋದಿ ಸೋಷಿಯಲ್ ಮೀಡಿಯಾ ಖಾತೆ
ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದರು. “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನನ್ನೆಲ್ಲ ಸೋಷಿಯಲ್ ಮೀಡಿಯಾ ಖಾತೆಗಳನ್ನು ದೇಶದ ಸ್ಫೂರ್ತಿದಾಯಕ ಹೆಣ್ಣುಮಕ್ಕಳಿಗೆ ನೀಡುತ್ತಿದ್ದೇನೆ. ಅವತ್ತೊಂದು ದಿನ ಅವರೇ ನನ್ನ ಸೋಷಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
ಮೋದಿ ಮಾತಿನ ಪ್ರಮುಖಾಂಶಗಳು
• ರಾಷ್ಟ್ರೀಯ ವಿಜ್ಞಾನಿಗಳ ದಿನದಂದು ಪ್ರತಿ ನಾಗರಿಕರು ಒಂದು ದಿನವನ್ನು ವಿಜ್ಞಾನಿಯಂತೆ ಕಳೆಯಿರಿ. ಅವತ್ತು ಬಾಹ್ಯಾಕಾಶ ಕೇಂದ್ರಗಳು, ಪ್ರಯೋಗಾಲಗಳಿಗೆ ಭೇಟಿ ನೀಡಿ.
• ಭಾರತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಮೈಲುಗಲ್ಲು ಸಾಧಿಸುತ್ತಿದೆ. ಇತ್ತೀಚೆಗೆ ಪ್ಯಾರಿಸ್ ಗೆ ಭೇಟಿ ನೀಡಿದ್ದಾಗ ಎಐ ಸಮಿಟ್ ನಲ್ಲಿ ಪಾಲ್ಗೊಂಡೆ. ಎಐ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಪ್ರತಿಯೊಂದು ದೇಶಗಳು ಬಣ್ಣಿಸಿವೆ.
• ಆರೋಗ್ಯಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಇನ್ನುಮುಂದೆ ಎಲ್ಲರೂ ಅಡುಗೆ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ತಗ್ಗಿಸಬೇಕು. ಆರೋಗ್ಯಯುತ ದೇಶದಿಂದ ಮಾತ್ರ ಏಳಿಗೆ ಸಾಧ್ಯ.
• ಆರೋಗ್ಯದ ವಿಚಾರದಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಆರೋಗ್ಯಯುತ ಜೀವನ ಶೈಲಿ ನಮ್ಮದಾಗಲಿ.