ಉಡುಪಿ : ಉಡುಪಿಯ ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದೀತೆಯ ಶ್ಲೋಕ ಪಠಿಸಿದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ದನಿಗೂಡಿಸಿದರು.
ಕೃಷ್ಣಮಠಕ್ಕೆ ಭೇಟಿ ನೀಡಿದ ನಂತರ ಸಭಾಂಗಣಕ್ಕೆ ಆಗಮಿಸಿದ ಮೋದಿಯವರಿಗೆ ಜಗದ್ಗುರು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸನ್ಮಾನಿಸಿದರು. ಬಳಿಕ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಭಾಗಿಯಾದ ಮೋದಿಯವರು, ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಸಚಿವ ಬೈರತಿ ಸುರೇಶ್, ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇತರರು ವೇದಿಕೆಯಲ್ಲಿದ್ದಾರೆ.
ಇದಕ್ಕೂ ಮುನ್ನ ಕೃಷ್ಣ ಮಠದಿಂದ ಗೀತಾ ಮಂದಿರಕ್ಕೆ ತೆರಳಿದ ಕೃಷ್ಣಮಠದ ಐವರು ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು.
ಮಾಧ್ವ ಸಂಪ್ರದಾಯದ ತಿಲಕ
ಇದಾದ ಬಳಿಕ ಸ್ವಾಮೀಜಿಗಳು ಪ್ರಧಾನಿ ಮೋದಿ ಹಣೆಗೆ ತಿಲಕವಿಟ್ಟು ತುಳಸಿಮಣಿ ನೀಡಿದರು. ಬಳಿಕ ಕನಕದಾಸರ ವಿಗ್ರಹಕ್ಕೆ ಮೋದಿ ಹೂಮಾಲೆ ಅರ್ಪಿಸಿದರು. ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ನಮಸ್ಕರಿಸಿದರು. ಇದೇ ವೇಳೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದರು. ನಂತರ ಮೋದಿಗೆ ಅಂಗಾರಕ ಅಕ್ಷತೆ ನೀಡಿ ಮಾಧ್ವ ಸಂಪ್ರದಾಯದ ತಿಲಕ ಹಚ್ಚಲಾಯಿತು.
ಇದನ್ನೂ ಓದಿ : ಬೆಂಗಳೂರಿನಲ್ಲಿರುವ DRDOದಲ್ಲಿ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳ ನೇಮಕ : ಸಂದರ್ಶನದ ದಿನಾಂಕ ಇಲ್ಲಿದೆ



















