ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ (ಫೆಬ್ರವರಿ5) ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಅವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಇದ್ದರು.
ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಧಾನಮಂತ್ರಿ ಅವರು ನಿರಂತರವಾಗಿ ಬದ್ಧರಾಗಿದ್ದು, ಯಾತ್ರಾ ತಾಣಗಳ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಉತ್ತಮಗೊಳಿಸಲು ಸಕ್ರಿಯ ಹೆಜ್ಜೆಗಳನ್ನು ತೆಗೆದುಕೊಂಡಿದ್ದಾರೆ, ಎಂದು ಪ್ರಧಾನಮಂತ್ರಿ ಕಚೇರಿ (PMO) ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾ ಕುಂಭ 2025, ಜನವರಿ 13ರಂದು ಪ್ರಾರಂಭಗೊಂಡಿದ್ದು, ಇದು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಮಾಗಮವಾಗಿದೆ. ಪ್ರಪಂಚದ ಮೂಲೆಮೂಲೆಗಳಿಂದ ಭಕ್ತಾದಿಗಳು ಇಲ್ಲಿ ಆಗಮಿಸುತ್ತಿದ್ದಾರೆ. ಮಹಾ ಕುಂಭ ಫೆಬ್ರವರಿ 26ರಂದು ಮಹಾಶಿವರಾತ್ರಿಯೊಂದಿಗೆ ಕೊನೆಗೊಳ್ಳಲಿದೆ.

ಈ ಅದ್ಧೂರಿ ಧಾರ್ಮಿಕ ಮೇಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭೇಟಿ ನೀಡಿದ್ದಾರೆ. ಇದಲ್ಲದೆ, ಆಪಲ್ ಸಹಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೌವೆಲ್ ಜಾಬ್ಸ್, ಕೋಲ್ಡ್‌ಪ್ಲೇ ಗಾಯಕ ಕ್ರಿಸ್ ಮಾರ್ಟಿನ್, ಹಾಗೂ ಹಾಲಿವುಡ್ ನಟಿ ಡಕೋಟಾ ಜಾನ್ಸನ್ ಸಹ ಈ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ.