ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಕನಸನ್ನು ನನಸಾಗಿಸಿದ್ದಾರೆ. ಇದು ಪ್ರತಿಯೊಬ್ಬ ರಾಷ್ಟ್ರೀಯವಾದಿ ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಮುಖರ್ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ ಅವರು, ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನವೇ ಒಂದು ಸಂದೇಶ. ಅವರ ಚಿಂತನೆಗಳಿಂದ ಇಂದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಧೈರ್ಯವಂತರಾಗಿ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದರು.
ಡಾ. ಮುಖರ್ಜಿ ಅವರು ದೇಶದ ಏಕತೆ, ಸಮಗ್ರತೆ, ಸಾಂಸ್ಕ್ತಿಕ ಹಿರಿಮೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯ ನಾಯಕ ಎಂದು ಹೇಳಿದ್ದಾರೆ.
ನಮ್ಮ ಪಕ್ಷಕ್ಕೆ ಸೈದ್ಧಾಂತಿಕ ಅಡಿಪಾಯ ಹಾಕಿ ಕೊಟ್ಟ ಭಾರತೀಯ ಜನಸಂಘದ ಸ್ಥಾಪಕರು. ದೇಶದ ರಾಜಕಾರಣದಲ್ಲಿ ಒಂದು ಬಲಿಷ್ಠ ರಾಷ್ಟ್ರೀಯವಾದಿ ಸಿದ್ಧಾಂತ ಇರುವ ರಾಜಕೀಯ ಪರಿವಾರಕ್ಕೆ ನಾಂದಿ ಹಾಡಿದವರು. 370 ನೇ ವಿಧಿಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಗಟ್ಟಿಯಾಗಿ ನಿಂತು, ಅದಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ಧೀಮಂತ ನಾಯಕ ಎಂದು ಅವರು ನೆನಪಿಸಿದರು.
ಡಾ. ಮುಖರ್ಜಿ ಅವರು ನಾಗರೀಕ ಆಡಳಿತವನ್ನು ಪ್ರತಿಪಾದಿಸಿದವರು. ಅದರಲ್ಲಿ ಈ ನೆಲದ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದವರು ಹಾಗೂ ತುಷ್ಟೀಕರಣದ ವಿರುದ್ಧ ಮಾತನಾಡುವ, ಎಲ್ಲದಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಧ್ವನಿ ಎತ್ತುವ ಧೈರ್ಯ ಹೊಂದಿದವರು ಎಂದು ಹೇಳಿದರು.