ಹೊಸ ವರ್ಷ ಆರಂಭವಾಗುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೋಟ್ಯಂತರ ರೈತರಿಗೆ ಗಿಫ್ಟ್ ನೀಡಿದ್ದಾರೆ. ಹೌದು, ರೈತರ ಬೆಳೆಗಳಿಗೆ ವಿಮಾ ಸೌಲಭ್ಯ ಒದಗಿಸುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಅನುದಾನವನ್ನು ಕೇಂದ್ರ ಸರ್ಕಾರವು 69,515 ಕೋಟಿ ರೂ.ಗೆ ಏರಿಕೆ ಮಾಡಿದ್ದು, 2025-26ನೇ ಸಾಲಿನಲ್ಲಿ ರೈತರಿಗೆ ಬೆಳೆ ವಿಮೆಯ ಸುರಕ್ಷತೆ ಲಭಿಸಲಿದೆ. ಇದು ಪ್ರಾಕೃತಿಕ ವಿಕೋಪದಂತಹ ಸಂಕಷ್ಟದ ಸಮಯದಲ್ಲಿ ರೈತರ ಕೈ ಹಿಡಿಯಲಿದೆ.
ಕೇಂದ್ರ ಸರ್ಕಾರವು ರೈತರಿಗೆ ನೆರವಾಗಲಿ ಎಂದು 2016ರಲ್ಲಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ರೈತರ ಬೆಳೆಗಳು ಹಾನಿಯಾದರೆ ಪರಿಹಾರ ನೀಡಲಾಗುತ್ತದೆ. ಬರಗಾಲ, ಚಂಡಮಾರುತ, ಆಲಿಕಲ್ಲು ಮಳೆಯಿಂದ ಬೆಳೆಹಾನಿಯಾದರೆ, ಕೇಂದ್ರ ಸರ್ಕಾರವೇ ರೈತರಿಗೆ ಪೂರ್ಣ ವಿಮೆ ಮೊತ್ತವನ್ನು ನೀಡುತ್ತದೆ. ಈ ಯೋಜನೆಯು ರೈತರ ಆದಾಯವನ್ನು ಸ್ಥಿರಗೊಳಿಸುವ ಜತೆಗೆ ನವೀನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಳ್ಳುವ ದಿಸೆಯಲ್ಲೂ ಕೇಂದ್ರ ಸರ್ಕಾರವು 824 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಫಂಡ್ ಫಾರ್ ಇನೋವೇಷನ್ ಆ್ಯಂಡ್ ಟೆಕ್ನಾಲಜಿ ಮೂಲಕ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದರ ಅನ್ವಯ ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಮೊದಲೇ ಕೃಷಿ ಭೂಮಿಯ ಫಲವತ್ತತೆ ನಿರ್ಧರಿಸುವುದು ಸೇರಿ ಹಲವು ರೀತಿಯಲ್ಲಿ ಸಹಕಾರಿಯಾಗಲಿದೆ.
ಇನ್ನು ಡಿಎಪಿ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಸಬ್ಸಿಡಿ ಅನ್ವಯ ರೈತರು 50 ಕೆ.ಜಿ ಡಿಎಪಿ ಪ್ಯಾಕೇಟ್ಅನ್ನು 1,350 ರೂ.ಗೆ ಖರೀದಿಸಬಹುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 3,850 ಕೋಟಿ ರೂ. ಮೀಸಲಿಟ್ಟಿದ್ದು, ಜನವರಿ 1ರಿಂದಲೇ ಸಬ್ಸಿಡಿ ಅನ್ವಯವಾಗಿದೆ. ಕಳೆದ ವರ್ಷ ಕೂಡ ಕೇಂದ್ರವು ಡಿಎಪಿ ರಸಗೊಬ್ಬರ ಸಬ್ಸಿಡಿಗೆ 2,625 ಕೋಟಿ ರೂ. ಬಿಡುಗಡೆ ಮಾಡಿತ್ತು. ಬೇರೆ ದೇಶಗಳಲ್ಲಿ ಡಿಎಪಿ ಮಾದರಿಯ ರಸಗೊಬ್ಬರಕ್ಕೆ 3 ಸಾವಿರ ರೂ. ಇದ್ದು, ಭಾರತದಲ್ಲಿ ಕೇಂದ್ರ ಸರ್ಕಾರದ ಸಬ್ಸಿಡಿಯೊಂದಿಗೆ ಕಡಿಮೆ ಹಣಕ್ಕೆ ಸಿಗುತ್ತಿದೆ.
ಕೇಂದ್ರ ಸರ್ಕಾರವು ಕಳೆದ 10 ವರ್ಷದಲ್ಲಿ ಡಿಎಪಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿ ಮೊತ್ತವನ್ನು ದ್ವಿಗುಣಗೊಳಿಸಿದೆ. 2004ರಿಂದ 2014ರ ಅವಧಿಯಲ್ಲಿ ರಸಗೊಬ್ಬರ ಸಬ್ಸಿಡಿ 5.5 ಲಕ್ಷ ಕೋಟಿ ರೂ. ನೀಡಲಾಗಿದ್ದರೆ, 2014ರಿಂದ 2024ರ ಅವಧಿಯಲ್ಲಿ ನೀಡಿದ ಸಬ್ಸಿಡಿ 11.9 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಇದರಿಂದ ರೈತರಿಗೆ ರಸಗೊಬ್ಬರದ ಬೆಲೆಯಲ್ಲಿನ ಹೊರೆಯನ್ನು ಇಳಿಸಲು ಸಾಧ್ಯವಾಗಿದೆ. ಒಟ್ಟಿನಲ್ಲಿ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿರುವುದು ಹೊಸ ವರ್ಷದ ಸಿಹಿ ಸುದ್ದಿಯಾಗಿದೆ.