ನವದೆಹಲಿ: ಕೋಟ್ಯಂತರ ಯುವಕ-ಯುವತಿಯರಿಗೆ ಉದ್ಯೋಗ ನೀಡುವ ದಿಸೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕಾಗಿ ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದ್ದು, ಎರಡೇ ವರ್ಷದಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಗೆ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 1.07 ಲಕ್ಷ ಕೋಟಿ ರೂಪಾಯಿ ವ್ಯಯಿಸಲು ಮುಂದಾಗಿದೆ.
ಪ್ರೋತ್ಸಾಹಕ ಯೋಜನೆಯು ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸಲಿದೆ. ತಯಾರಿಕಾ ವಲಯ ಮತ್ತು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಪ್ರೋತ್ಸಾಹಧನ ನೀಡಲು ಯೋಜನೆ ಹೆಚ್ಚಿನ ಗಮನ ಹರಿಸಲಿದೆ. ಇದು ಉದ್ಯೋಗ ಸೃಷ್ಟಿ ಹೆಚ್ಚಿಸಲು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಪ್ರೋತ್ಸಾಹಧನ ಒದಗಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯೋಜನೆ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ಎರಡು ಕಂತುಗಳಲ್ಲಿ ಗರಿಷ್ಠ 15 ಸಾವಿರ ರೂಪಾಯಿವರೆಗೆ ಒಂದು ತಿಂಗಳ ವೇತನ ಪಡೆಯಲಿದ್ದಾರೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಎರಡು ವರ್ಷಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದೆ.
ಹೊಸ ಯೋಜನೆ ಅಡಿಯಲ್ಲಿ ಎರಡು ವಿಭಾಗಗಳಲ್ಲಿ ಲಾಭ ಸಿಗಲಿದೆ. ಇಪಿಎಫ್ ಒನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ. ಇದರ ಅಡಿಯಲ್ಲಿ ಗರಿಷ್ಠ 15 ಸಾವಿರ ರೂ. ಗಳವರೆಗೆ ಒಂದು ತಿಂಗಳ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. 1 ಲಕ್ಷವರೆಗಿನ ವೇತನ ಹೊಂದಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿದ್ದಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು 12 ತಿಂಗಳ ಸೇವೆಯ ನಂತರ ಪಾವತಿಸಲಾಗುತ್ತದೆ.
ಎರಡನೆಯದಾಗಿ, ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತದೆಯಾದರೂ ತಯಾರಿಕಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಗರಿಷ್ಠ 1 ಲಕ್ಷ ರೂ.ವರೆಗಿನ ವೇತನ ಹೊಂದಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಈ ಪ್ರೋತ್ಸಾಹಧನ ಪಡೆಯುತ್ತಾರೆ. ಕನಿಷ್ಠ ಆರು ತಿಂಗಳವರೆಗೆ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ತಿಂಗಳಿಗೆ 3,000 ರೂ. ಪ್ರೋತ್ಸಾಹಧನ ನೀಡಲಿದೆ. ಇದನ್ನು ಎರಡು ವರ್ಷಗಳ ವರೆಗೆ ನೀಡಲಾಗುತ್ತದೆ.