ಫತೇಪುರ: ಐತಿಹಾಸಿಕ ಮಹತ್ವವುಳ್ಳ ಸಮಾಧಿಯೊಂದನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ, ಹಿಂದೂ ಸಂಘಟನೆಯೊಂದರ ಸದಸ್ಯರು ಸಮಾಧಿಯ ಹೊರಗಿನ ಗೋರಿಯನ್ನು ಧ್ವಂಸಗೊಳಿಸಿರುವ ಘಟನೆ ಸೋಮವಾರ ಉತ್ತರ ಪ್ರದೇಶದ ಫತೇಪುರದಲ್ಲಿ ನಡೆದಿದೆ.
ಈ ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತವು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಜತೆಗೆ ಪಿಎಸಿ ಪಡೆಗಳನ್ನೂ ನಿಯೋಜಿಸಿದೆ. ಅಲ್ಲದೆ, ವಿವಾದಿತ ಸ್ಥಳದ ಸುತ್ತಲೂ ಬ್ಯಾರಿಕೇಡ್ ಗಳನ್ನು ಹಾಕಿ ಭದ್ರತೆ ಹೆಚ್ಚಿಸಲಾಗಿದೆ.
ಸದರ್ ತಹಸಿಲ್ ಪ್ರದೇಶದಲ್ಲಿರುವ ನವಾಬ್ ಅಬ್ದುಸ್ ಸಮದ್ ಅವರ ಸಮಾಧಿಯು ಮೂಲತಃ ಒಂದು ದೇವಾಲಯವಾಗಿದ್ದು, ಕಾಲಾನಂತರದಲ್ಲಿ ಅದನ್ನು ಸಮಾಧಿಯಾಗಿ ಪರಿವರ್ತಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಆರೋಪಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ಇದು ಸಾವಿರ ವರ್ಷಗಳಷ್ಟು ಹಳೆಯದಾದ ಠಾಕೂರ್ ಜಿ (ಕೃಷ್ಣ) ಮತ್ತು ಶಿವನ ದೇವಸ್ಥಾನವಾಗಿತ್ತು ಎಂಬುದಕ್ಕೆ ಕಟ್ಟಡದೊಳಗೆ ಕಮಲದ ಹೂವು ಮತ್ತು ತ್ರಿಶೂಲದಂತಹ ಚಿಹ್ನೆಗಳಿರುವುದೇ ಸಾಕ್ಷಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಆರೋಪದ ಬೆನ್ನಲ್ಲೇ, ಹಿಂದೂ ಸಂಘಟನೆಯ ಸದಸ್ಯರು ಸಮಾಧಿಯ ಆವರಣಕ್ಕೆ ನುಗ್ಗಿ ಹೊರಗಿನ ಗೋರಿಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಇಂದು ಅದೇ ಸ್ಥಳದಲ್ಲಿ ಪೂಜೆ ಸಲ್ಲಿಸಲು ಸಂಘಟನೆಯು ಯೋಜಿಸಿದೆ ಎಂದು ವರದಿಯಾಗಿದ್ದು, ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಸರ್ಕಾರಿ ದಾಖಲೆಗಳ ಪ್ರಕಾರ, ಖಾಸ್ರಾ ಸಂಖ್ಯೆ 753 ರಲ್ಲಿರುವ ಈ ಸಮಾಧಿಯನ್ನು “ರಾಷ್ಟ್ರೀಯ ಆಸ್ತಿ ಮಕ್ಬರಾ ಮಂಗಿ” ಎಂದು ಪಟ್ಟಿ ಮಾಡಲಾಗಿದೆ. ಇದು ಸಂರಕ್ಷಿತ ಸ್ಮಾರಕವೆಂಬುದನ್ನು ಸೂಚಿಸುತ್ತದೆ. ಆದಾಗ್ಯೂ, ಇತ್ತೀಚಿನ ಧಾರ್ಮಿಕ ಪ್ರತಿಪಾದನೆಗಳಿಂದಾಗಿ ಈ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದೆ. ರಾಷ್ಟ್ರೀಯ ಉಲೇಮಾ ಕೌನ್ಸಿಲ್ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಸಮಾಧಿಯ ಸ್ವರೂಪಕ್ಕೆ ಯಾವುದೇ ಧಕ್ಕೆ ತರದಂತೆ ಮನವಿ ಮಾಡಿದೆ.