ಬೆಂಗಳೂರು: ಮುಡಾ ಪ್ರಕರಣದಲ್ಲಿ (muda case) ರಾಜ್ಯಪಾಲರು ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಕೆಂಡಾಮಂಡಲವಾಗಿದ್ದಾರೆ. ಈಗ ಏನೇ ಆದರೂ ಸಿದ್ದರಾಮಯ್ಯ (Siddaramaiah) ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರಕರಣದ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯಪಾಲರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ದೆಹಲಿಯಲ್ಲಿ ಈ ರಾಜ್ಯಪಾಲರ ವಿರುದ್ಧ ಹೋರಾಟ ನಡೆಸಲು ಚಿಂತನೆ ನಡೆದಿದೆ. ರಾಷ್ಟ್ರಪತಿಗಳನ್ನು ಭೇಟಿ ಮಾಡಿ ರಾಜ್ಯಪಾಲರನ್ನು ಮರಳಿ ಕರೆಯಿಸಿಕೊಳ್ಳಲು ಒತ್ತಾಯಿಸುವ ಕುರಿತು ಕೂಡ ಶಾಸಕರ ಒತ್ತಾಯಿಸಿದ್ದಾರೆ. ಸಭೆಯಲ್ಲಿ ಸರ್ವಾನುಮತದಿಂದ ರಾಜ್ಯಪಾಲರ ನಡೆ ಖಂಡಿಸಿ, ಶಾಸಕರು ಸಿಎಂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರಕ್ಕೆ ಯಾರು ಏನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲ ಗಟ್ಟಿಯಾಗಿ ಸಿಎಂ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದ್ದೇವೆ. ಹೈಕಮಾಂಡ್ ನಾಯಕರ ಭೇಟಿಗೆ ಶುಕ್ರವಾರ ದೆಹಲಿಗೆ ತೆರಳುತ್ತಿದ್ದೇವೆ. ರಾಜ್ಯ ಸರ್ಕಾರ ಮತ್ತು ಸಿಎಂ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಟ ಮಾಡುತ್ತಿದ್ದೇವೆ. ಈಗಲೂ ರಾಜ್ಯಪಾಲರು ತಮ್ಮ ನಿರ್ಣಯವನ್ನು ವಾಪಸ್ ಪಡೆದರೆ ಸಂವಿಧಾನಕ್ಕೆ ಗೌರವ ಕೊಟ್ಟಂತೆ ಆಗಲಿದೆ. ರಾಜ್ಯಪಾಲರಿಗೆ ಮುಜುಗರ ಬೇಡ ಅಂತಾ ಕಾನೂನಿನ ಚೌಕಟ್ಟಿನಲ್ಲೇ ಮನವಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.