ಉಡುಪಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಕುಂದಾಪುರದ ಶಾಸಕರು, ಕುಂದಾಪುರದ ವಿಧಾನ ಸಭಾ ಕ್ಷೇತ್ರ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಪತ್ರಿಕೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕುಂದಾಪುರದ ಜನಸಾಮಾನ್ಯರ ಬಹು ವರ್ಷಗಳ ಬೇಡಿಕೆಗಳಾದ ವರಾಹಿ ನೀರಾವರಿ ಯೋಜನೆಗೆ ಕಾಯಕಲ್ಪ, ಡೀಮ್ಡ್ ಅರಣ್ಯದ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿಗೆ ಮುಕ್ತಿ, ಕುಂದಾಪುರ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದರೊಂದಿಗೆ ಕುಂದಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣ, ಕುಂದಾಪುರದಲ್ಲಿ ಉಪ ಸಾರಿಗೆ ಆಯುಕ್ತರ ಕಛೇರಿ ನಿರ್ಮಾಣ, ಶೂನ್ಯ ಶಿಕ್ಷಕರ ಶಾಲೆಗೆ ಶಿಕ್ಷಕರ ನೇಮಕ, ಕರಾವಳಿಯ ಮೀನುಗಾರರ ಸಮಸ್ಯೆ, ಮೂರ್ತೆದಾರರ ಸಮಸ್ಯೆ, ಅಕ್ರಮ-ಸಕ್ರಮ, 94 ಸಿ, 94 ಸಿ ಸಿ ಹಾಗೂ 94 ಡಿ ಅರ್ಜಿ ನಮೂನೆ ಅಡಿಯಲ್ಲಿ ಭೂ ಮಂಜೂರಾತಿಗೆ ಇರುವ ಸಮಸ್ಯೆಗಳ ಪರಿಹಾರ ಹಾಗೂ ಕಿಂಡಿ ಆಣೆಕಟ್ಟುಗಳ ಸಮರ್ಪಕ ನಿರ್ವಹಣೆ ಮಾಡುವಂತೆ ತಿಳಿಸಿದ್ದಾರೆ.
ಅಷ್ಟೆ ಅಲ್ಲದೇ, ಕುಂದಾಪುರದ ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ಶಾಶ್ವತ ನೆಲೆ, ಭತ್ತದ ಬೆಂಬಲ ಬೆಲೆ, ಕುಂದಾಪುರದ ಹಳ್ಳಿ ಪ್ರದೇಶಗಳಿಗೆ ಸರ್ಕಾರಿ ಬಸ್ ಸೇವೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ, ಕೆಂಪು ಕಲ್ಲು, ಮರಳು ಇವುಗಳ ಸಮರ್ಪಕ ಪೂರೈಕೆ ಹಾಗೂ ಇವುಗಳ ಪೂರೈಕೆ ಇರುವ ಕಾನೂನು ತೊಡಕುಗಳ ನಿವಾರಣೆ, ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿಗಳ ಕೊರತೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಕುಂದಾಪುರದ ಶಾಸಕರು ಅಧಿವೇಶನದಲ್ಲಿ ಪ್ರಶ್ನೆಗಳನ್ನು ಮಾಡಬೇಕು ಎಂದು ಸೂಚಿಸಿದ್ದಾರೆ.
ಹಾಗೂ ಅಧಿವೇಶನದ ಶೂನ್ಯ ವೇಳೆಯಲ್ಲಿ ಈ ಎಲ್ಲಾ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೈಸೂರು | ಹಣಕ್ಕಾಗಿ ಉದ್ಯಮಿಯನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧನ



















