ಬೆಂಗಳೂರು: ಮೊಟ್ಟೆ ದಾಳಿಗೆ ಒಳಗಾಗಿರುವ ಶಾಸಕ ಮುನಿರತ್ನ ಮತ್ತೊಮ್ಮೆ ಕಾಂಗ್ರೆಸ್ ಮುಖಂಡೆ ಕುಸುಮಾ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧದ ಆರೋಪಗಳು ಸುಳ್ಳು ಎಂಬುವುದನ್ನು ಸಾಬೀತುಪಡಿಸಲು ನಾನು ಆದಿಚುಂಚನಗಿರಿ ಕಾಲ ಭೈರವ ದೇಗುಲಕ್ಕೆ ಬರುತ್ತೇನೆ. ನೀವು ಬನ್ನಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೇ, ರೇಪ್ ಕೇಸ್ ಹಾಕಿದವರು ನಿಮಗೆ ಪರಿಚಯ ಇಲ್ಲ ಎಂದು ಹೇಳಬೇಡಿ. ನಾನು ಎಲ್ಲ ದಾಖಲೆ ಬಿಡುಗಡೆ ಮಾಡುತ್ತೇನೆ. ನನ್ನ ಮೇಲೆ ಹಲ್ಲೆ ಮಾಡುವುದು, ಕೆಟ್ಟ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪ್ಪ, ಮಗಳು ಸೇರಿಕೊಂಡು ಡಿಕೆಶಿ ಹಾಗೂ ಡಿಕೆ ಸುರೇಶ್ ಮೂಲಕ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ನೀವು ವಿದ್ಯಾವಂತರು. ನಿಮ್ಮ ಜೊತೆ ಸಚಿವರು ಇದ್ದಾರೆ. ನೀವು ಹೇಳಿದ್ದನ್ನು ಮಾಜಿ ಸಂಸದ ಡಿಕೆ ಸುರೇಶ್, ಡಿಸಿಎಂ ಡಿಕೆ ಶಿವಕುಮಾರ್ ಕೇಳುತ್ತಾರೆ. ನಮ್ಮ ಕ್ಷೇತ್ರದಲ್ಲಿ ನಿಂತು ಹೋದ ಕೆಲಸವನ್ನ ಮಾಡಿಸಿಕೊಡಿ. ಅದು ಬಿಟ್ಟು ರಾಜಕೀಯ ದ್ವೇಷ ಮಾಡಬೇಡಿ. ಸುಮ್ಮನೆ ರೇಪ್ ಕೇಸ್, ಸುಳ್ಳು ಕೇಸ್ ಹಾಕಿಸಬೇಡಿ ಎಂದು ಮನವಿ ಮಾಡಿದ್ದಾರೆ.