ಕೋಲಾರ: ಶಾಸಕ ಕೊತ್ತೂರು ಮಂಜುನಾಥ್ ಗೆ ಜಾತಿ ಸಂಕಷ್ಟ ಶುರುವಾಗಿದೆ.
2018ರಲ್ಲಿ ನನ್ನ ಮೇಲೆ ಕೇಸ್ ಹಾಕಲಾಗಿತ್ತು. ಅದರ ಮೇಲೆ ನಾನು ತಡೆಯಾಜ್ಞೆ ತಂದಿದ್ದೆ. ಆನಂತರ ಕೇಸ್ ವಜಾ ಮಾಡಲು ಕೋರಿದ್ದೆ. ಆದರೆ, ಈಗ ಅದನ್ನು ತಳ್ಳಿ ಹಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ತನಿಖೆಗೆ ಆದೇಶಿಸಲಾಗಿದೆ. ವಿಚಾರಣೆಗೆ ನಾನು ಸಹಕರಿಸುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದಾಖಲಾಗಿರುವ ಎಫ್‌ಐಆರ್ ಬಗ್ಗೆ ಊಹಾಪೋಹ ಎದ್ದಿದೆ. 2010ರಿಂದ ಇಂಥ ವಿಚಾರಗಳೇ ಚರ್ಚೆಯಲ್ಲಿವೆ. ಶಾಸಕ ಸ್ಥಾನ ಹೋಗಿಬಿಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೀತಿ ಹೇಳಿ ಹೇಳಿಯೇ 2013ರ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಮುನಿಆಂಜಿನಪ್ಪ ಅವರನ್ನು ದಾರಿ ತಪ್ಪಿಸಿದ್ದರು. ಆತನಿಂದ ನ್ಯಾಯಾಲಯದಲ್ಲಿ ಸುಳ್ಳು ಹೇಳಿಸಿದರು. ಈಗ ಮತ್ತೆ ಆ ರೀತಿಯ ಆಟ ಆರಂಭಿಸಿದ್ದಾರೆ. ನನ್ನ ತಂದೆ, ತಾಯಿ, ಹುಟ್ಟೂರು, ಅಜ್ಜ, ಅಜ್ಜಿ ಬಗ್ಗೆ ಮಾಹಿತಿ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ