ಬೆಂಗಳೂರು: ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿ, ಸಾಕಷ್ಟು ಆರೋಪ – ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(SIT) ಶಾಸಕ ಅಶ್ವತ್ಥ್ ನಾರಾಯಣ್ ಅವರನ್ನು ವಿಚಾರಣೆಗೊಳಪಡಿಸಿದೆ.
ಮಾಜಿ ಡಿಸಿಎಂ ಹಾಗೂ ಶಾಸಕ ಅಶ್ವಥ್ ನಾರಾಯಣ (Ashwath Narayana) ಅವರನ್ನು ವಿಶೇಷ ತನಿಖಾ ತಂಡದ (SIT) ಪೊಲೀಸರು ವಿಚಾರಣೆ ನಡೆಸಿದ್ದಾರೆ. ನೇಮಕಾತಿ ಹಗರಣದಲ್ಲಿ ಮಾಗಡಿ (Magadi) ಮೂಲದವರು ಹೆಚ್ಚಾಗಿ ಹಾಗೂ ಸಂಬಂಧಿಕರೇ ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಇದರ ಹಿಂದೆ ಅಶ್ವತ್ಥ್ ನಾರಾಯಣ್ ಇದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಅಲ್ಲದೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಹಗರಣದ ತನಿಖೆಗೆ ಮರು ಆದೇಶ ನೀಡಿತ್ತು. ಈ ಕುರಿತು ಎಸ್ ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ಅಶ್ವಥ್ ನಾರಾಯಣ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ.
ವಿಚಾರಣೆಗೆ ಹಾಜರಾದ ಅಶ್ವಥ್ ನಾರಾಯಣ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ಇದು ಕೇವಲ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.