ಬ್ರಿಸ್ಬೇನ್: ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪಾಕಿಸ್ತಾನದ ದಿಗ್ಗಜ ಬೌಲರ್ ವಾಸೀಂ ಅಕ್ರಂ ಅವರ ಹೆಸರಿನಲ್ಲಿದ್ದ ದೀರ್ಘಕಾಲದ ದಾಖಲೆಯನ್ನು ಅಳಿಸಿಹಾಕುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಎಂಬ ಹಿರಿಮೆಗೆ ಸ್ಟಾರ್ಕ್ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಷಸ್ ಸರಣಿಯ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಮೊದಲ ದಿನವೇ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ತಮ್ಮ 102ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸ್ಟಾರ್ಕ್, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ವಾಸೀಂ ಅಕ್ರಂ ಅವರ 414 ವಿಕೆಟ್‌ಗಳ ದಾಖಲೆಯನ್ನು ಮುರಿದರು. ಬ್ರೂಕ್ ಅವರು ಸ್ಟಾರ್ಕ್ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ಸ್ಟೀವನ್ ಸ್ಮಿತ್‌ಗೆ ಕ್ಯಾಚ್ ನೀಡುವುದರೊಂದಿಗೆ, ಸ್ಟಾರ್ಕ್ ತಮ್ಮ ಖಾತೆಗೆ 415ನೇ ವಿಕೆಟ್ ಸೇರ್ಪಡೆ ಮಾಡಿಕೊಂಡರು.
ಇದಕ್ಕೂ ಮುನ್ನ ಪಂದ್ಯದ ಆರಂಭಿಕ ಓವರ್‌ನಲ್ಲೇ ಬೆನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಸ್ಟಾರ್ಕ್, ಅಕ್ರಂ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಜೋ ರೂಟ್ ಮತ್ತು ಝ್ಯಾಕ್ ಕ್ರಾವ್ಲಿ ಅವರ ತಾಳ್ಮೆಯ ಆಟದಿಂದಾಗಿ ದಾಖಲೆ ಮುರಿಯಲು ಸ್ಟಾರ್ಕ್ ಸ್ವಲ್ಪ ಸಮಯ ಕಾಯಬೇಕಾಯಿತು. ಆದರೆ ಟೀ ವಿರಾಮದ ಬಳಿಕ ತಮ್ಮ ಲಯ ಕಂಡುಕೊಂಡ ಅವರು, ಹ್ಯಾರಿ ಬ್ರೂಕ್ ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದರು. ಸುಲ್ತಾನ್ ಆಫ್ ಸ್ವಿಂಗ್ ಖ್ಯಾತಿಯ ವಾಸೀಂ ಅಕ್ರಂ 104 ಪಂದ್ಯಗಳಲ್ಲಿ 414 ವಿಕೆಟ್ ಪಡೆದಿದ್ದರೆ, ಸ್ಟಾರ್ಕ್ 102 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.
ಪ್ರಸ್ತುತ ಆಷಸ್ ಸರಣಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಸ್ಟಾರ್ಕ್, ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಎಡಗೈ ವೇಗಿಗಳ ಪಟ್ಟಿಯಲ್ಲಿ ಸ್ಟಾರ್ಕ್ ಮತ್ತು ಅಕ್ರಂ ನಂತರದ ಸ್ಥಾನಗಳಲ್ಲಿ ಶ್ರೀಲಂಕಾದ ಚಮಿಂಡಾ ವಾಸ್ (355), ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ (313) ಮತ್ತು ಭಾರತದ ಜಹೀರ್ ಖಾನ್ (311) ಇದ್ದಾರೆ.
ಇದನ್ನೂ ಓದಿ: ಗಬ್ಬಾದಲ್ಲಿ ಜೋ ರೂಟ್ ಶತಕದ ಆರ್ಭಟ : ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಹೊಸ ಇತಿಹಾಸ



















