ಗದಗ: ಮಹಿಳೆಯೊಬ್ಬರು ಬಾವಿಗೆ ಬಿದ್ದರೂ ಜೀವಂತವಾಗಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ.
ಕಾಣೆಯಾಗಿದ್ದ ಮಹಿಳೆ ಮೂರು ದಿನಗಳ ನಂತರ ನೀರಿಲ್ಲದ ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.
ಈ ಘಟನೆ ಜಿಲ್ಲೆಯ ತೋಟಗಂಟಿ ಗ್ರಾಮದಲ್ಲಿ ನಡೆದಿದೆ. ಕಾಣೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಗ್ರಾಮದ ಹೊಲವೊಂದರಲ್ಲಿನ ನೀರಿಲ್ಲದ ಹಳೇ ಬಾವಿಯಲ್ಲಿ ಮೂರು ದಿನಗಳ ನಂತರ ಸಿಕ್ಕಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಹಿಳೆ ಮಾತ್ರ ಇಲ್ಲಿ ಹೇಗೆ ಬಿದ್ದರು ಎಂಬುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಈ ಮಹಿಳೆ ಹೇಳುವ ಪ್ರಕಾರ, ನಾನು ಬೆಳಗಿನ ಜಾವ ಮನೆಯಂಗಳದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬರು ನನ್ನನ್ನು ಎಳೆದುಕೊಂಡು ಹೋಗಿದ್ದಾರೆ. ನವವಿವಾಹಿತೆಯ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಳು.
ಅಲ್ಲದೇ, ನನ್ನ ಕೈಬಳೆ, ಕಾಲುಂಗರ ನೀಡುವಂತೆ ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಳು. ನನ್ನ ಕಣ್ಣಿಗೆ ಕಾಣದಂತೆ ಮರೆ ಮಾಡಿ ಕುತ್ತಿಗೆ ಹಿಡಿದಿದ್ದಳು. ಗೋವಿನ ಜೋಳದ ಹೊಲದ ಮೂಲಕ ನನ್ನನ್ನು ಎಳೆದುಕೊಂಡು ಹೋಗಿ ನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದ್ದಾಳೆ. ಬೀಳುತ್ತಿದ್ದಂತೆ ನಾನು ಪ್ರಜ್ಞೆ ತಪ್ಪಿದ್ದೆ. ಮಾರನೇ ದಿನ ಎಚ್ಚರವಾಯಿತು. ಆದರೆ, ನನ್ನ ಧ್ವನಿ ಯಾರಿಗೂ ಕೇಳಿಸಿರಲಿಲ್ಲ. ಈಗ ಜನ ನೋಡಿ ಕಾಪಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ಆದರೆ, ಈ ವಿಚಿತ್ರ ಘಟನೆ ಕೇಳಿ ಜನರು ಆತಂಕಗೊಂಡಿದ್ದಾರೆ. ಕಳೆದ 6 ತಿಂಗಳ ಹಿಂದೆಯಷ್ಟೇ ಈ ಮಹಿಳೆ ಮದುವೆಯಾಗಿದ್ದರು. ಆದರೆ, ಇಲ್ಲಿ ಹೇಗೆ ಬಿದ್ದರು ಎಂಬುವುದೇ ಆಶ್ಚರ್ಯವಾಗಿದೆ. ಜನರು ಓಡಾಡಲು ಭಯ ಪಡುವಂತಾಗಿದೆ ಎನ್ನಲಾಗಿದೆ.