ಬೆಂಗಳೂರು: ಮಿಸ್ಸಿಂಗ್ ಆಗಿದ್ದ ವ್ಯಕ್ತಿ ಕೊಲೆಯಾಗಿರುವ ಪ್ರಕರಣ 7 ತಿಂಗಳ ನಂತರ ಬಯಲಿಗೆ ಬಂದಿದೆ.
ಬೆಂಗಳೂರಿನಲ್ಲಿ ಮಿಸ್ಸಿಂಗ್ ಆಗಿದ್ದ ವ್ಯಕ್ತಿ ಮೈಸೂರಿನಲ್ಲಿ(mysore) ಹೆಣವಾಗಿ ಪತ್ತೆಯಾಗಿದ್ದಾನೆ. ಹಣದ ಆಸೆಗಾಗಿ ಮೂವರು ಸೇರಿಕೊಂಡು ಗೆಳೆಯನನ್ನೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಆನಂದ್ ಕೊಲೆಯಾಗಿರುವ ವ್ಯಕ್ತಿ. ಈತ ಜಯನಗರ(Jayanagar) ನಿವಾಸಿ ಎನ್ನಲಾಗಿದೆ. ಮಹಮದ್ ಗೌಸ್, ಸೈಯದ್ ನೂರ್ ಮತ್ತು ನದೀಮ್ ಪಾಷಾ ಬಂಧಿತ ಆರೋಪಿಗಳು. ಆರೋಪಿಗಳು ಹಾಗೂ ಕೊಲೆಯಾಗಿರುವ ಆನಂದ್ ಸ್ನೇಹಿತರು.
ಕೊಲೆಯಾಗಿರುವ ಆನಂದ್ ಜಯನಗರದ ಒಂದು ಮನೆ ಮಾರಾಟ(sale) ಮಾಡಿದ್ದ. 90 ಲಕ್ಷ ರೂ.ಗೆ ಮನೆ ಮಾರಾಟ ಮಾಡಿದ್ದು, 45 ಲಕ್ಷ ರೂ. ಮುಂಗಡವಾಗಿ ಪಡೆದುಕೊಂಡಿದ್ದ. ಆನಂದ್ ಸಹಿ ಮಾಡಿದ್ದ ಚೆಕ್ ಆರೋಪಿಗಳ ಬಳಿ ಇದ್ದವು.
ಆನಂದ್ ಕೆಲವರಿಗೆ ಹಣ ನೀಡಬೇಕಾಗಿತ್ತು. ಹೀಗಾಗಿ ಆರೋಪಿ ಸೈಯದ್ ನೂರ್ ಎಲ್ಲರಿಗೂ ಚೆಕ್ ಕೊಟ್ಟಿದ್ದ. ಹಣ ನೀಡಿ ಉಳಿದ 12 ಲಕ್ಷ ರೂ.ಗಳನ್ನು ತನ್ನಲ್ಲೇ ಇಟ್ಟುಕೊಂಡಿದ್ದ. ಮನೆ ಖರೀದಿಸಿದ್ದ ಪ್ರಸಾದ್ ಎನ್ನುವವರು ಇನ್ನುಳಿದ ಬಾಕಿ ಮೊತ್ತಕ್ಕೆ ಚೆಕ್ ನೀಡಿದ್ದರು. ಖಾಲಿ ಚೆಕ್ ಗಳನ್ನು ಕೂಡ ಆನಂದ್ ತನ್ನ ಸ್ನೇಹಿತ ನೂರ್ ಗೆ ನೀಡಿದ್ದ. ಹೀಗಾಗಿ ಎಲ್ಲ ಹಣವನ್ನು ತಾವೇ ಲಪಟಾಯಿಸಲು ಆರೋಪಿಗಳು ಪ್ಲಾನ್ ಮಾಡಿದ್ದಾರೆ. ಕೆಆರ್ ಎಸ್ ಬಳಿ ಕೊಲೆ ಮಾಡಿ ಸೇತುವೆ ಮೇಲಿಂದ ಎಸೆದಿದ್ದಾರೆ.
ಇತ್ತ ಬೆಂಗಳೂರಿನ ಬನಶಂಕರಿಯಲ್ಲಿ ಮಿಸ್ಸಿಂಗ್ ಕೇಸ್(missing case) ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಮೈಸೂರಿನ ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತ ದೇಹ ನೀರಿನಲ್ಲಿ ಪತ್ತೆಯಾಗಿದೆ. ಆ ಸಂದರ್ಭದಲ್ಲಿ ಅಸಹಜ ಸಾವು ಎಂದು ಕೂಡ ಕೇಸ್ ದಾಖಲಿಸಿಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ.