ಬೆಂಗಳೂರು | ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. 4 ವರ್ಷದ ಕಂದಮ್ಮನ ಮೇಲೆ ದುರುಳರು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣಾ ವ್ಯಾಪ್ತಿಯ ವಿಟ್ಟಸಂದ್ರ ಬಳಿಯ ಬೋಳುಗುಟ್ಟದಲ್ಲಿ ನಡೆದಿದೆ.
ಗುರುವಾರ ಸಂಜೆ ಕಾಣೆಯಾಗಿದ್ದ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಶವ ಇಂದು (ಮಾ.28) ಬೋಳುಗುಟ್ಟದ ನೀಲಗಿರಿ ತೋಪಿನಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾಲ್ಕು ವರ್ಷದ ಬಾಲಕಿ ವಿಟ್ಟಸಂದ್ರ ಸಮೀಪದ ಶೆಡ್ನಲ್ಲಿ ಪೋಷಕರ ಜೊತೆ ವಾಸವಿದ್ದಳು. ಪೋಷಕರು ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಗುರುವಾರ ಎಂದಿನಂತೆ ಬಾಲಕಿಯನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಬಂದು ನೋಡಿದಾಗ ಬಾಲಕಿ ಕಾಣೆಯಾಗಿದ್ದಳು. ಬಾಲಕಿ ಕಾಣೆಯಾಗುತ್ತಿದ್ದಂತೆ ಪೋಷಕರು ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಬಳಿಕ ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲು ಮಾಡಲಾಗಿತ್ತು.
ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾಗ, ಇಂದು ಸಂಜೆ ಬೋಳುಗುಟ್ಟದ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಶವವು ಸಂಪೂರ್ಣ ನಗ್ನ ಸ್ಥಿತಿಯಲ್ಲಿದ್ದು, ಕಿರಾತಕರು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಮಗುವಿನ ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಮುಖವನ್ನು ಕಲ್ಲಿನಿಂದ ಜಜ್ಜಿ ವಿಕೃತವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಈ ಬಾರಿ ಕೆ.ಎಲ್. ರಾಹುಲ್ ಕೈಗೆ ‘ಆರೆಂಜ್ ಕ್ಯಾಪ್’ – ಅಶ್ವಿನ್ ಭವಿಷ್ಯವಾಣಿ!



















