ಜಕಾರ್ತಾ: ಕೆಲಸಕ್ಕೆಂದು ತೋಟಕ್ಕೆ ಹೋಗಿದ್ದ 63 ವರ್ಷದ ರೈತ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಆತನ ದೇಹ ಬೃಹತ್ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದೆ!
ಹೌದು, ಬರೋಬ್ಬರಿ 26 ಅಡಿ ಉದ್ದದ ಹೆಬ್ಬಾವೊಂದು ಇಂಡೋನೇಷ್ಯಾದ ರೈತರೊಬ್ಬರನ್ನು ನುಂಗಿಹಾಕಿದ ಆಘಾತಕಾರಿ ಘಟನೆ ಆಗ್ನೇಯ ಸುಲಾವೆಸಿಯ ದಕ್ಷಿಣ ಬುಟನ್ ಜಿಲ್ಲೆಯಲ್ಲಿ ನಡೆದಿದೆ.
ತೋಟಕ್ಕೆ ಹೋಗಿದ್ದ ರೈತ ಕಾಣೆಯಾದ ಕೆಲವೇ ಗಂಟೆಗಳಲ್ಲಿ, ಅವರ ದೇಹ ಹೆಬ್ಬಾವಿನ ಉದರದೊಳಗೆ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ಅಲೆ ಎಬ್ಬಿಸಿದೆ.
ಇತ್ತೀಚೆಗೆ ರೈತ ತಮ್ಮ ತೋಟದ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದರು. ಆದರೆ, ಎಂದಿನಂತೆ ಸಂಜೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಚಿಂತಿತರಾದ ಅವರ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಹುಡುಕಾಟ ಆರಂಭಿಸಿದರು.
ಮಧ್ಯಾಹ್ನ 2:30ರ ಸುಮಾರಿಗೆ, ಮಜಾಪಾಹಿತ್ ಗ್ರಾಮದ ಸಮೀಪದ ತೋಟವೊಂದರಲ್ಲಿ ಗ್ರಾಮಸ್ಥರು ವಿಚಿತ್ರವಾಗಿ ಒದ್ದಾಡುತ್ತಿರುವ ಒಂದು ಬೃಹತ್ ಹೆಬ್ಬಾವನ್ನು ಕಂಡರು. ಹಾವಿನ ದೇಹ ಅಸಹಜವಾಗಿ ಊದಿಕೊಂಡಿತ್ತು. ಏನನ್ನೋ ದೊಡ್ಡದಾಗಿ ನುಂಗಿರುವ ಅನುಮಾನ ಸ್ಥಳೀಯರಲ್ಲಿ ಮೂಡಿತು.

ಹೆಬ್ಬಾವಿನ ಹೊಟ್ಟೆಯಲ್ಲಿ ರೈತನ ಮೃತದೇಹ
ಕುತೂಹಲ ಮತ್ತು ಆತಂಕದಿಂದ ಹಾವಿನ ಸಮೀಪ ತೆರಳಿದ ಗ್ರಾಮಸ್ಥರು, ಅದರ ಗಾತ್ರ ಮತ್ತು ವಿಚಿತ್ರ ವರ್ತನೆಯಿಂದ ಅನುಮಾನಗೊಂಡರು. ಇದು ಬಹುಶಃ ಕಾಣೆಯಾದ ರೈತನನ್ನೇ ನುಂಗಿರಬಹುದು ಎಂದು ಊಹಿಸಿದರು. ಕೂಡಲೇ ಧೈರ್ಯ ಮಾಡಿ ಹಾವನ್ನು ಕೊಂದರು. ನಂತರ ಅದರ ಹೊಟ್ಟೆಯನ್ನು ಸೀಳಿದಾಗ, ಅವರ ಕಣ್ಣೆದುರು ಭಯಾನಕ ದೃಶ್ಯ ಅನಾವರಣಗೊಂಡಿತು- ಕಾಣೆಯಾಗಿದ್ದ ರೈತನ ಸಂಪೂರ್ಣ ದೇಹ ಹೆಬ್ಬಾವಿನ ಜೀರ್ಣವಾಗದ ಹೊಟ್ಟೆಯೊಳಗೆ ಇತ್ತು! ಆಘಾತಕ್ಕೊಳಗಾದ ಗ್ರಾಮಸ್ಥರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ, ಅಧಿಕಾರಿಗಳು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆದು, ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ದಕ್ಷಿಣ ಬುಟನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಸಂಸ್ಥೆಯ ತುರ್ತು ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರಾದ ಲಾಓಡೆ ರಿಸಾವಲ್ ಅವರು ಮಾತನಾಡಿ, ಈ ಪ್ರದೇಶದಲ್ಲಿ ಮನುಷ್ಯನೊಬ್ಬ ಹೆಬ್ಬಾವಿಗೆ ಬಲಿಯಾದ ಮೊತ್ತ ಮೊದಲ ಘಟನೆ ಇದಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಗ್ರಾಮದ ಮೇಲ್ವಿಚಾರಣಾ ಅಧಿಕಾರಿಯಾದ ಸೆರ್ಟು ದಿರ್ಮನ್ ಅವರು, ರೈತನ ಕುಟುಂಬ ನಾಪತ್ತೆ ದೂರು ದಾಖಲಿಸಿದ ನಂತರ ತೋಟದಲ್ಲಿ ಹುಡುಕಾಟ ನಡೆಸಲಾಗಿತ್ತು ಎಂದು ದೃಢಪಡಿಸಿದ್ದಾರೆ. ರೈತನ ಮೋಟಾರ್‌ಬೈಕ್ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ನಂತರ, ಅವರ ಗುಡಿಸಲಿನ ಬಳಿ ಈ ಬೃಹತ್ ಹೆಬ್ಬಾವು ಪತ್ತೆಯಾಗಿತ್ತು ಎಂದಿದ್ದಾರೆ.
ಮರುಕಳಿಸಿದ 2017ರ ಘಟನೆ
ಇಂತಹ ಘಟನೆಗಳು ಜಗತ್ತಿಗೆ ವಿಸ್ಮಯಕಾರಿಯಾಗಿ ಕಂಡರೂ, ಇದು ಇಂಡೋನೇಷ್ಯಾಗೆ ಹೊಸದೇನಲ್ಲ. 2017ರ ಮಾರ್ಚ್‌ನಲ್ಲಿ, ಸುಲಾವೆಸಿಯ ಸಲುಬಿರೋ ಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆಗ 25 ವರ್ಷದ ರೈತ ಅಕ್ಬರ್ ಎಂಬವರ ದೇಹ ಕೂಡ 23 ಅಡಿ (7 ಮೀಟರ್) ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿತ್ತು. ಆ ಹೆಬ್ಬಾವು ಕೂಡ ಅಸಹಜವಾಗಿ ಊದಿಕೊಂಡು, ವಿಚಿತ್ರವಾಗಿ ಚಲಿಸುತ್ತಿತ್ತು.
ಸಾಮಾನ್ಯವಾಗಿ 20 ಅಡಿಗಿಂತಲೂ ಹೆಚ್ಚು ಉದ್ದ ಬೆಳೆಯುವ ಈ ಹೆಬ್ಬಾವುಗಳು ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್‌ನಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಇವು ಸಣ್ಣ ಪ್ರಾಣಿಗಳನ್ನು ನುಂಗುವುದು ಸಾಮಾನ್ಯವಾದರೂ, ಮನುಷ್ಯರನ್ನು ನುಂಗುವಂತಹ ಘಟನೆಗಳು ಅತ್ಯಂತ ಅಪರೂಪ.