ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರಕ್ಕೆ ಮತ್ತೊಂದು ಶಕ್ತಿ ಎಂಬಂತೆ, ಭಾರತವು ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಡ್ರೋನ್ ಮೂಲಕ ಉಡಾಯಿಸಲಾಗುವ ನಿಖರ ಕ್ಷಿಪಣಿ ಯುಎಲ್‌ಪಿಜಿಎಂ-ವಿ3ಯನ್ನು (UAV Launched Precision Guided Missile – ULPGM) ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಯಶಸ್ವೀ ಪ್ರಯೋಗವನ್ನು ಡಿಆರ್‌ಡಿಒ (ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ನಡೆಸಿದ್ದು, ದೇಶದ ರಕ್ಷಣಾ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ಎಂದು ಬಣ್ಣಿಸಲಾಗಿದೆ.
ಆಂಧ್ರಪ್ರದೇಶದ ಕರ್ನೂಲ್ ನ ರಾಷ್ಟ್ರೀಯ ಓಪನ್ ಏರಿಯಾ ರೇಂಜ್ (NOAR) ನಲ್ಲಿ ಡಿಆರ್‌ಡಿಒ ಮತ್ತು ಭಾರತೀಯ ಉದ್ದಿಮೆಗಳ ಸಹಭಾಗಿತ್ವದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆದಿದೆ. ಡ್ರೋನ್ ಗಳ ಮೂಲಕ ಕ್ಷಿಪಣಿಯನ್ನು ಉಡಾಯಿಸಿ, ಅದು ನಿಖರವಾಗಿ ತನ್ನ ಗುರಿಯನ್ನು ಧ್ವಂಸಗೊಳಿಸಿದೆ.
ಈ ಸಾಧನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದು, ಈ ಪ್ರಯೋಗವನ್ನು “ಭಾರತದ ಕ್ಷಿಪಣಿ ಸಾಮರ್ಥ್ಯಕ್ಕೆ ಹೊಸ ಸಾಕ್ಷ್ಯ” ಎಂದು ಕರೆದಿದ್ದಾರೆ. ಭಾರತೀಯ ಸೇನೆಗೆ ಅಗತ್ಯವಿರುವ ಪ್ರಮುಖ ರಕ್ಷಣಾ ತಂತ್ರಜ್ಞಾನಗಳನ್ನು ಈಗ ಭಾರತೀಯ ಉದ್ಯಮಗಳು ರೂಪಿಸಿ ನಿರ್ಮಿಸುವ ಮಟ್ಟಿಗೆ ಬೆಳೆದಿರುವುದನ್ನು ಈ ಸಾಧನೆ ತೋರಿಸುತ್ತಿದೆ ಎಂದು ಅವರು ಹೊಗಳಿದ್ದಾರೆ.
ಉದ್ಯಮಗಳಿಗೆ ದೊಡ್ಡ ಅವಕಾಶ
ಈ ಯಶಸ್ವೀ ಪ್ರಯೋಗದಲ್ಲಿ ಡಿಆರ್‌ಡಿಒ ಜೊತೆಗೆ ಹಲವಾರು ಕೈಗಾರಿಕೆಗಳು, ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳು ಭಾಗಿಯಾಗಿರುವುದು ಗಮನಾರ್ಹವಾಗಿದೆ. ಇದು ಭಾರತದಲ್ಲಿ ಸ್ವದೇಶೀ ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ದಾರಿ ತೆರೆದಿದೆ.
ಈ ಸಾಧನೆಯ ಮಹತ್ವ
– ಭಾರತೀಯ ಸೇನೆಯ ಸಮರ್ಥತೆಯಲ್ಲಿ ಹೆಚ್ಚಳ.
– ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆಗೆ ಮತ್ತೊಂದು ಹೆಜ್ಜೆ.
– ಉಚ್ಚ ತಂತ್ರಜ್ಞಾನ ಅಭಿವೃದ್ಧಿಗೆ ದೇಶೀಯ ಕೈಗಾರಿಕೆಗಳಿಗೆ ಉತ್ತೇಜನ.



















