ಬೀಜಿಂಗ್: ಇತ್ತೀಚೆಗೆ ಮದುವೆಯ ಮನೆಯಲ್ಲಿ ರೋಟಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ರೋಟಿಗೆ ಎಂಜಲು ಉಗಿದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಯನ್ನು ಉಂಟುಮಾಡಿತ್ತು. ಅಂತೆಯೇ ಈಗ ಚೀನಾದ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಇಬ್ಬರು ಪುರುಷರು ಸಾರು ತುಂಬಿದ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಘಟನೆಯ ನಂತರ, ಕಂಪನಿಯು 4,000ಕ್ಕೂ ಹೆಚ್ಚು ಗ್ರಾಹಕರಿಗೆ ಪರಿಹಾರ ನೀಡುವುದಾಗಿ ಘೋಷಿಸಿದೆ. ಪ್ರೈವೇಟ್ ಡೈನಿಂಗ್ ರೂಮ್ನಲ್ಲಿ ಇಬ್ಬರು ಪುರುಷರು ಸಾರಿನ ಪಾತ್ರೆಗೆ ಮೂತ್ರ ವಿಸರ್ಜಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ನಂತರ ರೆಸ್ಟೋರೆಂಟ್ ಆಹಾರ ಸುರಕ್ಷತೆಯ ನಿಯಮಗಳ ಉಲ್ಲಂಘನೆಯ ಬಗ್ಗೆ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ.
ವೈರಲ್ ವಿಡಿಯೊದಲ್ಲಿ, ರೆಸ್ಟೋರೆಂಟ್ನ ಟೇಬಲ್ ಮೇಲೆ ನಿಂತಿದ್ದ ಯುವಕನೊಬ್ಬ ಕುದಿಯುತ್ತಿರುವ ಸಾರಿನ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡುವುದು ಕಾಣಿಸುತ್ತದೆ. ಕಂಪನಿಯು ಸೋಶಿಯಲ್ ಮೀಡಿಯಾದಲ್ಲಿ ಶಾಂಘೈನ ಡೌನ್ಟೌನ್ನಲ್ಲಿನ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿರುವುದನ್ನು ದೃಢಪಡಿಸಿದೆ ಮತ್ತು ಈ ಘೋರ ಕೃತ್ಯಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಹಾಗೆಯೇ, ಈ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಆದರೆ, ಕಂಪನಿಯು ಪರಿಹಾರದ ಮೊತ್ತವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಶಾಂಘೈ ಪೊಲೀಸರು ಈ ಪ್ರಕರಣದಲ್ಲಿ ಟ್ಯಾಂಗ್ ಮತ್ತು ವು ಎಂಬ 17 ವರ್ಷದ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಹೆಚ್ಚುವರಿಯಾಗಿ, ಕಂಪನಿಯು ಅವರ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಸಹ ದಾಖಲಿಸಿದೆ. 1994 ರಲ್ಲಿ ಸಣ್ಣ ಸಿಚುವಾನ್ ಪಟ್ಟಣದಲ್ಲಿ ಸ್ಥಾಪನೆಯಾದ ಹೈಡಿಲಾವೊ ಜಾಗತಿಕವಾಗಿ ಪ್ರಸಿದ್ಧ ಚೀನೀ ಪಾಕಪದ್ಧತಿ ಬ್ರಾಂಡ್ ಆಗಿ ಬೆಳೆದಿದೆ. ಜೂನ್ 2023 ರ ಹೊತ್ತಿಗೆ, ಇದು ಚೀನಾದಲ್ಲಿ 1,360 ರೆಸ್ಟೋರೆಂಟ್ಗಳನ್ನು ಮತ್ತು ವಿಶ್ವಾದ್ಯಂತ 1,400 ಕ್ಕೂ ಹೆಚ್ಚು ರೆಸ್ಟೋರೆಂಟ್ಗಳನ್ನು ಹೊಂದಿತ್ತು. ಇಂಟರ್ನ್ಯಾಷನಲ್ ಸಿಂಗಾಪುರ್, ಯುಎಸ್, ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾ ಸೇರಿದಂತೆ 14 ದೇಶಗಳಲ್ಲಿ 122 ಹೈಡಿಲಾವೊ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.
ಚೀನಾದಲ್ಲಿ ಆಹಾರ ಸುರಕ್ಷತಾ ಹಗರಣಗಳು ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದವು. 2008 ರಲ್ಲಿ ಕಲುಷಿತ ಹಾಲನ್ನು ಕುಡಿದು ಲಕ್ಷಾಂತರ ಶಿಶುಗಳು ಅನಾರೋಗ್ಯಕ್ಕೀಡಾಗಿದ್ದು, ಆರು ಶಿಶುಗಳು ಸಾವನ್ನಪ್ಪಿದ್ದವು.
ಇದೇ ರೀತಿಯ ಇನ್ನೊಂದು ಘಟನೆ ಇತ್ತೀಚೆಗೆ ನಡೆದಿದೆ. ಗುಲಾಬ್ ಜಾಮೂನು ತಯಾರಿಸಿಟ್ಟ ಕಡಾಯಿಗೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಗುಲಾಬ್ ಜಾಮೂನು ಕಡಾಯಿಗೆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಆತನ ಪಕ್ಕದಲ್ಲಿ ನಿಂತಿದ್ದ ಸಹೋದ್ಯೋಗಿ ಇದನ್ನು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಬುದ್ಧಿವಂತ ವ್ಯಕ್ತಿ ಇಂತಹ ಕೆಲಸ ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.