ದಾವಣಗೆರೆ : ರಾತ್ರಿ ವೇಳೆ ಚನ್ನಗಿರಿ ತಾಲ್ಲೂಕಿನ ಗಿರಿಯಾಪುರ ಗ್ರಾಮದಲ್ಲಿ ಭದ್ರಾ ನದಿಯ ಸಮೀಪ ರೈತರು ಸಂಗ್ರಹಿಸಿರುವ ಸುಮಾರು 25 ಲೋಡ್‌ಕ್ಕಿಂತ ಹೆಚ್ಚು ಅಡಿಕೆ ಸಿಪ್ಪೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಅಡಕೆ ಸಿಪ್ಪೆಗೆ ಬೆಂಕಿ ಹಚ್ಚಿದ ಪರಿಣಾಮ ದಟ್ಟ ಹೊಗೆ ಗ್ರಾಮದಾದ್ಯಂತ ಹರಡಿದ್ದು, ಬೆಂಕಿಯ ಸಮೀಪದಲ್ಲೇ ಅಡಕೆ ತೋಟವಿರುವುದರಿಂದ ಬೆಂಕಿ ತೋಟಕ್ಕೆ ಹರಡಬಹುದೆಂಬ ಭೀತಿಯಿಂದ ಗ್ರಾಮಸ್ಥರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಚನ್ನಗಿರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ ಭಾರೀ ಅನಾಹುತ ಸಂಭವಿಸಬಹುದಿತ್ತು, ಆದರೆ ತ್ವರಿತ ಕಾರ್ಯಾಚರಣೆ ಮೂಲಕ ಹೆಚ್ಚಿನ ನಷ್ಟ ತಪ್ಪಿಸಲಾಯಿತು ಎನ್ನಲಾಗಿದೆ.
ಘಟನೆಯ ಬಳಿಕ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಅಡಕೆ ಸಿಪ್ಪೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸಿರಿಯಲ್ ಸೆಟ್, ಶಾಮಿಯಾನ ಅಂಗಡಿಗೆ ನುಗ್ಗಿ ಕಳ್ಳತನ | ಸಿಸಿಟಿವಿಯಲ್ಲಿ ದೃಶ್ಯ ಸೆರೆ



















