ಮಂಗಳೂರು: ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿದ್ದು, ಮತ್ತೆ ಕರಾವಳಿ ಭುಗಿಲೆದ್ದಿದೆ. ಎಲ್ಲೆಡೆ ಹಿಂದೂ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದು, ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ನ ಫಾಜಿಲ್ ಎಂಬಾತನ ಹತ್ಯೆ ನಡೆದಿತ್ತು. ಈ ಸೇಡಿಗೆ ಈಗ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನೀಶ್’ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು, ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ದುಷ್ಕರ್ಮಿಗಳು ಬಹಳ ದಿನದಿಂದಲೂ ಸುಹಾಸ್ ಹತ್ಯೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಮಾ. 31ರಂದೇ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂಬ ಸಂಶಯವೊಂದು ಕಾಡುತ್ತಿದೆ. ಏಕೆಂದರೆ ಮಾ. 31ರಂದು ಟಾರ್ಗೆಟ್ ಕಿಲ್ಲರ್-03 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಸುಹಾಸ್ ಶೆಟ್ಟಿ ಫೋಟೋ ಹಾಕಿ ಸೇಡು ತೀರಿಸಿಕೊಳ್ಳುವುದಾಗಿ ಹೇಳಲಾಗಿದೆ ಎನ್ನಲಾಗಿದೆ.
‘ಫಿನೀಶ್’ ಅಂತ ಪೋಸ್ಟ್ ಬಹಿರಂಗ
ಸುಹಾಸ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ Troll_mayadiaka ಹೆಸರಿನ ಇನ್‌ಸ್ಟಾಗ್ರಾಂ ಪೇಜ್ನಲ್ಲಿ ‘ಫಿನೀಶ್’ ಅಂತ ಪೋಸ್ಟ್ ಬಹಿರಂಗವಾಗಿತ್ತು. ಹತ್ಯೆಯಾದ ಬೆನ್ನಲ್ಲೇ ವಿಡಿಯೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಲಾಗಿದೆ. ಜೊತೆಗೆ ‘Waiting for next wicket’ ಎಂಬ ಪೋಸ್ಟ್ ನ್ನು ಕೂಡ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.
ಸುಹಾಸ್ ಶೆಟ್ಟಿ ಶೆಟ್ಟಿ ಹಿಂದೂ ಕಾರ್ಯಕರ್ತನಾಗಿದ್ದ. ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಸುಹಾಸ್ ಶೆಟ್ಟಿ ವಿರುದ್ಧ ಒಟ್ಟು 5 ಪ್ರಕರಣಗಳಿದ್ದವು. ಬಜಪೆ ಠಾಣೆಯಲ್ಲಿ 3, ಬೆಳ್ತಂಗಡಿ, ಸುರತ್ಕಲ್ ಠಾಣೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದ್ದವು. ಒಂದರಲ್ಲಿ ಶಿಕ್ಷೆಗೆ ಕೂಡ ಸುಹಾಸ್ ಒಳಗಾಗಿದ್ದ. ಎರಡು ವಿಚಾರಣೆ ಹಂತದಲ್ಲಿದ್ದರೆ, ಎರಡು ಕೇಸ್ ಖುಲಾಸೆಯಾಗಿವೆ. ಕೊಲೆ, ಕೊಲೆಗೆ ಯತ್ನ ಆರೋಪ ಹಿನ್ನಲೆ ಪೊಲೀಸರು ರೌಡಿಶೀಟ್ ಓಪನ್ ಮಾಡಲಾಗಿತ್ತು. ಫಾಜಿಲ್ ಕೊಲೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ A1 ಆರೋಪಿಯಾಗಿದ್ದ.
ಹಂತಕರು ಪಕ್ಕಾ ಪ್ಲ್ಯಾನ್ ಮಾಡಿಯೇ ಸುಹಾಸ್ ಶೆಟ್ಟಿ ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರಿನ ಮೂಲಕ ಸುಹಾಸ್ ಕಾರು ಚೇಸ್ ಮಾಡಿ, ಸುಹಾಸ್ ಕಾರಿಗೆ ಡಿಕ್ಕಿಹೊಡೆದಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಸುಹಾಸ್ ಕಾರು ಸಲೂನ್‌ಗೆ ನುಗ್ಗಿದೆ. ಆಗ ನಾಲ್ವರು ಹಂತಕರು ಮಾರಕಾಸ್ತ್ರಗಳನ್ನ ಹಿಡಿದು ಸಾರ್ವಜನಿಕರ ಕಣ್ಣೆದುರೇ ಸುಹಾಸ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸದ್ಯ ಅಟ್ಯಾಕ್ ಮಾಡಿರುವ ದೃಶ್ಯಗಳು ವೈರಲ್ ಆಗುತ್ತಿವೆ.