ಬೆಂಗಳೂರು: ಕೋವಿಡ್ – 19 ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದಂತೆ ಅವ್ಯವಾಹರಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್ ಐಟಿ ರಚಿಸಲು ಸರ್ಕಾರ ಮುಂದಾಗಿದೆ.
ಸಚಿವ ಸಂಪುಟದ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್, ಸತ್ಯ ಸಂಶೋಧನಾ ವರದಿಯ ನಂತರ ಯಾರ ಪಾತ್ರ ಏನು ಎಂಬುವುದನ್ನು ಬಹಿರಂಗ ಪಡಿಸಲು ಎಸ್ ಐಟಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಕುನ್ಹಾ ಆಯೋಗವು 11 ಸಂಪುಟಗಳಲ್ಲಿ ವರದಿ ಸಲ್ಲಿಸಿದೆ. ವರದಿಯಲ್ಲಿ ರೂ. 7,223.64 ಕೋಟಿ ರೂ. ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯ ಅವ್ಯವಹಾರದ ಕುರಿತು ತನಿಖೆ ನಡೆಸಿದೆ. 500 ಕೋಟಿ ರೂ.ಗಳ ಮೊತ್ತದ ವಸೂಲಾತಿ ಶಿಫಾರಸ್ಸು ಮಾಡಿದೆ. 55,000 ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಪರಿಶೀಲಿಸಿ ಆಯೋಗವು ವರದಿ ಸಲ್ಲಿಸಿದೆ ಎಂದಿದ್ದಾರೆ.
ರೂ. 500 ಕೋಟಿಗಳ ಮೊತ್ತದ ವಸೂಲಾತಿ ಕುರಿತು ಪ್ರಕ್ರಿಯೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು. ಕೋವಿಡ್ ವೇಳೆ ಉಪಕರಣ ಖರೀದಿ ಸೇರಿದಂತೆ ಹಲವು ರೀತಿಯಲ್ಲಿ ಅಕ್ರಮ ನಡೆದಿತ್ತು ಎಂದು ಆರೋಪಿಸಿದ್ದ ಕಾಂಗ್ರೆಸ್ ಪಕ್ಷ, ಹಿಂದಿನ ಆರೋಗ್ಯ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ ಎನ್ನಲಾದ ಅಕ್ರಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿತ್ತು.