ನವದೆಹಲಿ: ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ 40 ಕೋಟಿಗೂ ಅಧಿಕ ಜನರು ಮಿಂದೆದಿದ್ದಾರೆ. ಈ ವೇಳೆ ನೀರಿನ ಸುರಕ್ಷತೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಅದು ಸ್ನಾನಕ್ಕೆ ಸುರಕ್ಷಿತ ಅಷ್ಟೇ ಅಲ್ಲ. ಅದರಿಂದ ಯಾವುದೇ ಚರ್ಮರೋಗ ಬರುವುದಿಲ್ಲ ಎಂದು ವರದಿ ಬಂದಿದೆ.
ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಅಜಯ್ ಸೋಂಕರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಗಂಗಾ ನೀರು ಸ್ನಾನಕ್ಕೆ ಸುರಕ್ಷಿತ ಮಾತ್ರವಲ್ಲ, ಅದರ ಸಂಪರ್ಕಕ್ಕೆ ಬರುವುದರಿಂದ ಚರ್ಮ ರೋಗಗಳು ಬರುವುದಿಲ್ಲ ಎಂದಿದ್ದಾರೆ.
ಸಂಗಮ್ ಮತ್ತು ಅರೈಲ್ ಸೇರಿದಂತೆ ಐದು ಘಾಟ್‌ಗಳಿಂದ ಗಂಗಾ ನೀರಿನ ಪ್ರಯೋಗಾಲಯ ಪರೀಕ್ಷೆಯ ನಂತರ ಈ ಕುರಿತು ಹೇಳಿಕೆ ನೀಡಿದ್ದಾರೆ. ಐದು ಘಾಟ್ ಗಳಿಂದ ಗಂಗಾ ನೀರಿನ ಮಾದರಿಗಳನ್ನು ತೆಗೆದುಕೊಂಡು ಪ್ರಯೋಗಾಲಯದಲ್ಲಿ ಸೂಕ್ಷ್ಮ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಅವಧಿಯಲ್ಲಿ ಕೋಟ್ಯಂತರ ಭಕ್ತರು ಸ್ನಾನ ಮಾಡಿದರೂ ನೀರಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯಾಗಲಿ ಅಥವಾ ನೀರಿನ pH ಮಟ್ಟದಲ್ಲಿ ಯಾವುದೇ ಇಳಿಕೆಯಾಗಲಿ ಕಾಣಿಸಿಲ್ಲ ಎಂದು ಹೇಳಿದ್ದಾರೆ.
ಸಂಶೋಧನೆಯಲ್ಲಿ ಗಂಗಾ ನೀರಿನಲ್ಲಿ 1100 ವಿಧದ ಬ್ಯಾಕ್ಟೀರಿಯೊಫೇಜ್ ಗಳು ಕಂಡು ಬಂದಿವೆ. ಇದು ಹಾನಿಕಾರಕ ಬ್ಯಾಕ್ಟೀರಿಯಾ ನಾಶಪಡಿಸುತ್ತದೆ. ಇದರಿಂದಾಗಿ ನೀರು ಕಲುಷಿತವಾಗಿಲ್ಲ. ನನ್ನ ಶುದ್ಧತೆಯ ಬಗ್ಗೆ ಯಾರಿಗಾದರೂ ಪ್ರಶ್ನೆಗಳಿದ್ದರೆ, ಗಂಗಾಜಲವನ್ನು ತೆಗೆದುಕೊಂಡು ನಮ್ಮ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ತೃಪ್ತಿಪಡಬಹುದು ಎಂದು ಕೂಡ ಅವರು ಹೇಳಿದ್ದಾರೆ.
ಮೂರು ತಿಂಗಳ ನಿರಂತರ ಸಂಶೋಧನೆಯ ನಂತರವೂ ಗಂಗಾ ಜಲವು ಅತ್ಯಂತ ಶುದ್ಧವಾಗಿರುವುದನ್ನು ಕೇಳಿ ಎಲ್ಲರೂ ಈಗ ಆಶ್ಚರ್ಯ ಪಡುತ್ತಿದ್ದಾರೆ. ಬ್ಯಾಕ್ಟೀರಿಯೊಫೇಜ್ (ಬ್ಯಾಕ್ಟೀರಿಯಾ ಭಕ್ಷಕ)ದಿಂದಾಗಿ ಗಂಗಾ ನೀರಿನ ಶುದ್ಧತೆ ಅಷ್ಟೊಂದು ಭಕ್ತರು ಸ್ನಾನ ಮಾಡಿದರೂ ಹಾಗೆಯೇ ಉಳಿದಿದೆ. ಹೀಗಾಗಿ ಯಾವುದೇ ಚರ್ಮರೋಗ ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ.
ಡಾ. ಅಜಯ್ ಕುಮಾರ್ ಸೋಂಕರ್ ಪ್ರಯಾಗರಾಜ್‌ನ ನೈನಿ ನಿವಾಸಿ. ವಿಜ್ಞಾನಿಯಾಗಿದ್ದಾರೆ. ಕೃತಕವಾಗಿ ಮುತ್ತುಗಳನ್ನು ಬೆಳೆಸುವ ಮೂಲಕ, ದೇಶದ ವಿಜ್ಞಾನಿಗಳನ್ನು ಬೆರಗುಗೊಳಿಸಿದ್ದರು. ಇತ್ತೀಚೆಗಷ್ಟೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.