ಕೋಲಾರ: ಸಚಿವ ಭೈರತಿ ಸುರೇಶ್ ವಿರುದ್ದ ಕೋಲಾರ ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರ ಹಾದಿ- ಬೀದಿ ರಂಪವಾಗಿತ್ತು. ಇದು ಕಾಂಗ್ರೆಸ್ ನ ಆತಂಕಕ್ಕೆ ಕಾರಣವಾಗಿತ್ತು. ಈ ಸಮಸ್ಯೆ ಬಗೆಹರಿಸಲು ಸಚಿವರು, ಶಾಸಕರ ಮನೆಗೆ ಬಂದಿದ್ದರು.
ಅಸಮಾಧಾನದ ವಿಚಾರವಾಗಿ ಸಚಿವ ಭೈರತಿ ಸುರೇಶ್, ಬಂಗಾರಪೇಟೆ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಚಿವರಿಗೆ ಕೆಜಿಎಫ್ ಶಾಸಕಿ ರೂಪಾಶಶಿಧರ್ ಸಾಥ್ ನೀಡಿದರು.
ಇತ್ತೀಚೆಗೆ ಶಾಸಕ ನಾರಾಯಣಸ್ವಾಮಿ, ಉಸ್ತುವಾರಿ ಸಚಿವ ಭೈರತಿ ಸುರೇಶ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಸಚಿವರು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವರು, ನಮ್ಮಲ್ಲಿ ಯಾವುದೇ ವೈಮನಸ್ಸಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಶಾಸಕ ನಾರಾಯಣಸ್ವಾಮಿ ನನ್ನ ಅಣ್ಣನ ಸಮಾನ. ರೂಪಾ ತಂಗಿಯಿದ್ದಂತೆ ಎಂದು ಹೇಳಿದರು.