ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉದ್ಯಮಿ ದಾಸ್ ಪೈ ಮಧ್ಯೆ ಜಟಾಪಟಿ ಜೋರಾಗಿ ನಡೆಯುತ್ತಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಚಿವ ಹಾಗೂ ಉದ್ಯಮಿ ಮಧ್ಯೆ ವಾಕ್ಸಮರ ಮುಂದುವರೆದಿದೆ. ಬೆಂಗಳೂರಿನ ಐಟಿ ಉದ್ಯಮ ಹಾಗೂ ಸ್ಟಾರ್ಟ್ ಅಪ್ ಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ ವೊಂದನ್ನು ಮಾಡಿದ್ದರು. ರಾಜ್ಯದಲ್ಲಿ ಅತಿ ಹೆಚ್ಚು ಯೂನಿಕಾರ್ನ್‌ಗಳಿವೆ. ಅತಿ ಹೆಚ್ಚು ಐಟಿ ಎಕ್ಸ್ ಪೋರ್ಟ್ ಮಾಡುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ್ದರು.
ಆದರೆ, ಇದಕ್ಕೆ ತಿರುಗೇಟು ನೀಡಿದ್ದ ಉದ್ಯಮಿ ಮೋಹನ್ ದಾಸ್ ಪೈ, ಸಚಿವ ಪ್ರಿಯಾಂಕ್ ಖರ್ಗೆ ಅವರೆ ನಮಗೆ ಇದೆಲ್ಲವೂ ತಿಳಿದಿದೆ. ನಮ್ಮ ಜೀವನವನ್ನು ಸುಧಾರಿಸಲು ನೀವು ನಮ್ಮ ಮಂತ್ರಿಯಾಗಿ ಏನು ಮಾಡಿದ್ದೀರಿ? ಹೇಳಿ ಎಂದು ತಿರುಗೇಟು ನೀಡಿದ್ದರು. ಯಾವುದೇ ರಸ್ತೆ ಗುಂಡಿಗಳು ಇಲ್ಲದೇ ಇರುವ ಉತ್ತಮ ನಗರ ಮಾಡುವ ಬಗ್ಗೆ ಗ್ಯಾರಂಟಿ ಇದೆಯಾ? ಉತ್ತಮ ಪಾದಚಾರಿ ಮಾರ್ಗದ ಜೊತೆಗೆ ಬೆಂಗಳೂರು ಕ್ಲೀನ್ ಸಿಟಿಯಾಗಿ ಮಾಡಬಲ್ಲಿರಾ? ಇದು ರಾಕೆಟ್ ಸೈನ್ಸ್ ಅಲ್ಲ. ನಿರಂತರ ನಿರ್ವಹಣೆ ಕೆಲಸ. ದಯವಿಟ್ಟು ನಮಗೆ ಕನಿಷ್ಠ ಸ್ವಚ್ಛವಾದ, ನಡೆದಾಡಬಹುದಾದ ಸಿಟಿ ಮಾಡುವಂತೆ ಸಚಿವ ಡಿಕೆ ಶಿವಕುಮಾರ್ ಜೊತೆ ಮಾತನಾಡಿ. ಕಳೆದ 2 ವರ್ಷಗಳಲ್ಲಿ ನಮ್ಮ ಜೀವನವು ಹೆಚ್ಚು ಶೋಚನೀಯವಾಗಿದೆ ಎಂದು ತಿರುಗೇಟು ನೀಡಿದ್ದರು.
ಇದಕ್ಕೆ ಕೌಂಟರ್ ಕೊಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೋಹನ್‌ದಾಸ್ ಪೈ ಅವರೇ, ಇದು ರಾಕೆಟ್ ವಿಜ್ಞಾನವಲ್ಲದಿದ್ದರೆ ನಿಮ್ಮ ಅಂದಿನ ಸರ್ಕಾರಕ್ಕೆ ಏಕೆ ಜ್ಞಾನೋದಯ ಮಾಡಲಿಲ್ಲ? ನಾವು 135 ಸ್ಥಾನಗಳನ್ನು ಪಡೆದ ನಂತರ ನಿಮ್ಮ ಸಂಕಟಗಳು ನೋವಿನಿಂದ ಕೂಡಿದೆ ಎಂದು ತೋರುತ್ತಿದೆ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಕರ್ನಾಟಕವನ್ನು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿರುವಾಗ ಏಕೆ ಸುಮ್ಮನಿರುವಿರಿ? ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೆ ಮತ್ತೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಕಳೆದ 10 ವರ್ಷಗಳಲ್ಲಿ ಬೆಂಗಳೂರು ದೇಶದ ಮಹಾನಗರಗಳಲ್ಲಿ ಅತ್ಯಂತ ವೇಗವಾಗಿ ಬೆಳೆದಿದೆ ಎಂದು ನಿಮಗೆ ತಿಳಿದಿದೆ.
ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ನಿಮ್ಮ ನಿರಂತರ ನಕಾರಾತ್ಮಕತೆಯನ್ನು ನಿಮ್ಮ ನಾಯಕರು ಮೆಚ್ಚಬಹುದು ಎಂದು ನನಗೆ ಖಾತ್ರಿಯಿದೆ. ಆದರೆ ನಿಮಗೆ ತಿಳಿದಿರಲಿ, ನಿಮ್ಮ ಈ ಟೀಕೆಗಳು ನಿಮಗೆ ದೆಹಲಿಯಲ್ಲಿ ಅವಕಾಶ ದೊರಕಿಸುವುದಿಲ್ಲ. ನಿಮ್ಮ ನಿರಂತರ ಟೀಕೆಗಳಿಂದ ರಾಜ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೀರಾ? ನೀವು ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದೀರಾ? ದೆಹಲಿಯ ಅಧಿಕಾರದ ಮೊಗಸಾಲೆಯಲ್ಲಿ ನೀವು ಎಲ್ಲರಿಗೂ ಹತ್ತಿರವಾಗಿದ್ದೀರಿ. ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡಿ ತೋರಿಸಿ ಎಂದು ಕಿಡಿಕಾರಿದ್ದಾರೆ.