ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ (Belagavi Session) ವಿಪ ಸದಸ್ಯ ಸಿ.ಟಿ. ರವಿ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಸತ್ಯ ಎಂಬುವುದು ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ರಾಜ್ಯ ಆಡಳಿತ ಮತ್ತು ಸಿಬ್ಬಂಧಿ ಸುಧಾರಣೆ ಇಲಾಖೆ (ಡಿಎಪಿಆರ್) ನೀಡಿದ್ದ ಸದನದ ವಿಡಿಯೋವನ್ನು ಪರೀಕ್ಷೆಗೆ ಒಳಪಡಿಸಿದಾಗ ಸಿಟಿ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ಫೋರೆನ್ಸಿಕ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಾಲ್ಕು ಗಂಟೆಯ ವಿಡಿಯೋ ರೆಕಾರ್ಡ್ ನಲ್ಲಿ 7 ಬಾರಿ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂಬುವುದು ಪೊಲೀಸ್ ಮಾಹಿತಿಯಿಂದ ತಿಳಿದು ಬಂದಿದೆ.
ಹೀಗಾಗಿ ಸಿಟಿ ರವಿ ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಮುಂದಾಗಿದೆ. ಆದರೆ ತಾನು ಅವಾಚ್ಯ ಶಬ್ದ ಬಳಸಿಲ್ಲ ಎನ್ನುತ್ತಿರುವ ಸಿ.ಟಿ. ರವಿ, ವಾಯ್ಸ್ ಸ್ಯಾಂಪಲ್ ನೀಡಲು ಕೂಡ ನಿರಾಕರಿಸಿದ್ದಾರೆ. ಹೀಗಾಗಿ, ನ್ಯಾಯಾಲಯದ ಮೂಲಕ ವಿಚಾರಣೆಗೆ ಮತ್ತು ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಈಗ ಸಿದ್ಧವಾಗಿದೆ. ಅಲ್ಲದೇ, ಈಗಾಗಲೇ ಕೋರ್ಟ್ ಮೊರೆ ಹೋಗಿರುವ ಸಿಐಡಿ, ನೋಟಿಸ್ ನೀಡಲು ನಿರ್ಧರಿಸಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ ಡಿ. 19 ರಂದು ವಿಧಾನ ಪರಿಷತ್ ನಲ್ಲಿ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸಿಟಿ ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆನಂತರ ಲಕ್ಷ್ಮೀ ಹೆಬ್ಬಾಳ್ಕರ್ ದೂರು ನೀಡಿದ್ದರು. ಪೊಲೀಸರು ಸಿ.ಟಿ. ರವಿ ಅರೆಸ್ಟ್ ಆಗಿ, ಕೋರ್ಟ್ ಜಾಮೀನು ಪಡೆದು ಹೊರ ಬಂದಿದ್ದರು.
ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ತನಿಖೆ ಕೈಗೊಂಡಿರುವ ಸಿಐಡಿ ಚುರುಕುಗೊಳಿಸಿದೆ.